ಜೈಪುರ: ತನ್ನ 7 ವರ್ಷದ ಮಗಳ ಮೇಲೆಯೇ ಪಾಪಿ ತಂದೆಯೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆ ರಾಜಸ್ಥಾನದ ಉದಯ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಭಾನುವಾರ ರಾತ್ರಿ ಸುರ್ಫಾಲಾ ಕಾಯ ಗ್ರಾಮದ ಗೋವರ್ಧನ್ ವಿಲಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರದಿಗಳ ಪ್ರಕಾರ, ಆರೋಪಿ 36 ವರ್ಷದ ಟೆಂಪೋ ಚಾಲಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕಿಯ ತಾಯಿ ತನ್ನ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನಿಡಿದ್ದು, ದೂರಿನಲ್ಲಿ ಪತಿಗೆ ವಿಪರೀತ ಕುಡಿತದ ಛಟವಿದೆ. ಅಲ್ಲದೆ ಕಂಠಪೂರ್ತಿ ಮದ್ಯಪಾನ ಮಾಡಿ ಮನೆಗೆ ಬಂದು ತನಗೆ ಹೊಡೆಯುತ್ತಾನೆ ಎಂದು ತಿಳಿಸಿದ್ದಾರೆ. ಪತ್ನಿಯ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಮಹಿಳೆ ತನ್ನ ಪತಿಯನ್ನು ಬಿಟ್ಟು ತವರು ಮನೆಗೆ ತೆರಳಿದ್ದರು. ಇದರಿಂದ ಸಿಟ್ಟುಗೊಂಡಿದ್ದ ಪತಿ, ರಾತ್ರಿ ಆಕೆಯ ಮನೆಗೆ ತೆರಳಿ ತನ್ನ ಮನೆಗೆ ವಾಪಸ್ ಬರುವಂತೆ ತಗಾದೆ ತೆಗೆದಿದ್ದಾನೆ. ಅಲ್ಲದೆ ಇದೇ ಸಂದರ್ಭದಲ್ಲಿ 7 ವರ್ಷದ ಮಗಳನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಎಳೆದುಕೊಂಡು ಬಂದು ಸಂಬಂಧಿಕರೊಬ್ಬರ ಅಂಗಡಿಯಲ್ಲಿರಿಸಿದ್ದಾನೆ ಎಂದು ಗಿರ್ವಾದ ಡಿಎಸ್‍ಪಿ ತಿಳಿಸಿದ್ದಾರೆ.
ತಂದೆ ತನ್ನ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪರಿಣಾಮ ಆಕೆಯ ಬಟ್ಟೆ ರಕ್ತಸಿಕ್ತವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಳು. ಅಲ್ಲದೆ ತಂದೆ ನನ್ನನ್ನು ಟೆಂಪೋದೊಳಗೆ ಕರೆದೊಯ್ದು ರೇಪ್ ಮಾಡಿದ ಎಂದು ಬಾಲಕಿ ತನ್ನ ತಾಯಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಸಂತ್ರಸ್ತ ಬಾಲಕಿಯ ತಾಯಿಯ ಹೇಳಿಕೆಗಳನ್ನು ಪಡೆದುಕೊಂಡಿದ್ದು, ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.