ಗದಗ: ಗದಗದ ಐತಿಹಾಸಿಕ ಲಕ್ಕುಂಡಿಯಲ್ಲಿ 9ನೇ ದಿನದ ಉತ್ಖನನ ಕಾರ್ಯ ಮುಂದುವರಿದಿದೆ. ಬಗೆದಷ್ಟು ಪ್ರಾಚ್ಯಾವಶೇಷಗಳು ಬಯಲಾಗುತ್ತಲೇ ಇವೆ. ಕಳೆದ 8 ದಿನಗಳಿಂದಲೂ ಉತ್ಖನನ ವೇಳೆ ಒಂದಿಲ್ಲೊಂದು ಪುರಾತನ ವಸ್ತುಗಳು ಸಿಗುತ್ತಲೇ ಇವೆ. ಈ ನಡುವೆ ಇವತ್ತು ಮತ್ತೊಂದೆಡೆ ಅಪರೂಪದ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಜೊತೆ ಬಾವಿಯಲ್ಲಿ ಪುರಾತನ ಶಿಲೆಗಳು ಪತ್ತೆಯಾಗಿರೋದು ಅಚ್ಚರಿ ಮೂಡಿಸಿದೆ.
ಲಕ್ಕುಂಡಿ ಗ್ರಾಮದ ಷಣ್ಮುಖಪ್ಪರವದಿ ಎಂಬುವರ ಜಮೀನಿನಲ್ಲಿ ಈ ಅಪರೂಪದ ಶಿಲಾಮೂರ್ತಿ ಪತ್ತೆಯಾಗಿದೆ. ಪತ್ತೆಯಾದ 7 ಹೆಡೆಯ ಅಪರೂಪದ ಶಿಲೆ ವಿಜಯನಗರ ಅರಸರ ಕಾಲಕ್ಕೆ ಸೇರಿದೆ ಎನ್ನಲಾಗಿದೆ. ಅಲಂಕಾರಿಕ ವಿನ್ಯಾಸ ಹೊಂದಿರುವ ನಾಗರಕಲ್ಲಿನ ಮೂರ್ತಿ ಐತಿಹಾಸಿಕ ಮಹತ್ವ ಪಡೆದಿದೆ. ನಿಧಿ ಇದ್ದಲ್ಲಿ ಸರ್ಪ ಕಾವಲು ಇರುತ್ತೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಸ್ಥಳದಲ್ಲಿ ಹಾವಿನ ಶಿಲೆಗಳು ಸಿಕ್ಕಿದ್ದು ಅಚ್ಚರಿ ಮೂಡಿಸಿದೆ. 7 ಹೆಡೆಯುಳ್ಳ ನಾಗರ ಹಾವಿನ ಶಿಲೆ ಅಕ್ಕ ಪಕ್ಕ 2 ಹೆಡೆಯ 7 ಶಿಲೆಗಳು ಪತ್ತೆಯಾಗಿವೆ. ಸುಂದರ ಉಬ್ಬು ಕೆತ್ತನೆ ಇರುವ 7 ಹೆಡೆಯ ಸರ್ಪದ ಶಿಲೆ ನೆಲದಲ್ಲಿ ಹುದುಗಿ ಹೋಗಿದೆ.
ಲಕ್ಕುಂಡಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಲಕ್ಕುಂಡಿ ದೇವಸ್ಥಾನದ ಆವರಣದಲ್ಲಿನ ಉತ್ಖನನ 9ನೇ ದಿನಕ್ಕೆ ಕಾಲಿಟ್ಟಿದ್ದು, ಇಡೀ ಊರಿನಲ್ಲಿ ಏನೆಲ್ಲಾ ಸಿಗಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಇದೀಗ ತೋಟದ ಬಾವಿಯೊಂದರಲ್ಲಿ ಶಿಲೆಗಳು ಪತ್ತೆಯಾಗಿವೆ. ಸುಮಾರು ನೂರು ವರ್ಷದಷ್ಟು ಹಳೆಯ ಕಾಲದ ಬಾವಿಯ ಗೋಡೆಯಲ್ಲಿ ಶಿಲೆಗಳಿವೆ. ಈ ಶಿಲೆಗಳನ್ನು ಕಲ್ಲುಗಳ ಮಧ್ಯೆ ಇರಿಸಿಯೇ ಪ್ಲಾಸ್ಟಿಂಗ್ ಮಾಡಲಾಗಿದೆ. ದಾನ ಶಿಲೆ, ದ್ವಾರಪಾಲಕನ ಶಿಲೆ, ಬೋದಿಗೆ ಶಿಲೆಗಳು ಪತ್ತೆಯಾಗಿವೆ.
ಇನ್ನು, ಲಕ್ಕುಂಡಿಯ ತೋಟದ ಮನೆಯಲ್ಲಿ ಶಿಲೆಗಳು ಪತ್ತೆ ಬಗ್ಗೆ ಜಮೀನು ಮಾಲೀಕ ಕಲ್ಲಯ್ಯ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಮ್ಮ ಪೂರ್ವಜರು ಕಟ್ಟಿದ ಬಾವಿ, ಮನೆ ಎಂದಿದ್ದಾರೆ. 100 ವರ್ಷಗಳ ಹಿಂದೆಯೇ ಈ ಬಾವಿ, ಮನೆ ಕಟ್ಟಲಾಗಿದೆ. ದೇವಸ್ಥಾನಗಳು ಅವನತಿ ನಂತರ ಈ ಬಾವಿ, ಮನೆ ಕಟ್ಟಲಾಗಿದೆ ಎಂದಿದ್ದಾರೆ. ಅಳಿದುಳಿದ ಕಲ್ಲುಗಳನ್ನು ಬಳಸಿ ಈ ಬಾವಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಜಮೀನು ಮಾಲೀಕ ಕಲ್ಲಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ಲಕ್ಕುಂಡಿಯಲ್ಲಿ ದಿನದಿಂದ ದಿನಕ್ಕೆ ವಿಶೇಷ ವಸ್ತುಗಳು ಭೂಮಿ ಒಡಲಾಳದಲ್ಲಿ ಪತ್ತೆಯಾಗುತ್ತಿವೆ. ಈ ನಡುವೆ ಇಂದು ಹಲವಾರು ವಿಸ್ಮಯಕಾರಿ ಪುರಾತನ ಶಿಲ್ಪಗಳು ಪತ್ತೆಯಾಗಿವೆ. ವಿಶೇಷವಾಗಿ, ಉತ್ಖನನಕಾರರಿಗೆ ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸಿವೆ. ಇದು ಲಕ್ಕುಂಡಿಯ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಮತ್ತಷ್ಟು ಎತ್ತಿ ಹಿಡಿದಿದೆ.
Laxmi News 24×7