ಕಳೆದ ಮೂರು ದಿನಗಳಿಂದ ಸತತವಾಗಿ ಮತ್ತು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ , ಯಾದಗಿರಿ , ಬಾಗಲಕೋಟೆ , ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡು ನಡುಗಡ್ಡೆಗಳಂತೆ ಗೋಚರಿಸುತ್ತಿವೆ .
ಕುಂಭದ್ರೋಣದಿಂದ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಪ್ರಭಾವಕ್ಕೊಳಗಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ . ಅನೇಕ ಕಡೆ ರಸ್ತೆ ಮತ್ತು ಸೇತುವೆಗಳು ಕೊಚ್ಚಿಹೋಗಿವೆ . ಕಮಲಾಪುರ ಹತ್ತಿರವಿರುವ ಜವಳಗಾ , ಸೇಡಂ ತಾಲುಕಿನಲ್ಲಿರುವ ಸಮಖೇಡ್ ತಾಂಡಾ , ಚಿತಾಪುರ ತಾಲೂಕಿನ ಗುಂಡುಗುರ್ತಿ , ಮುತ್ತಗಾ , ಕಲಬುರಗಿ ತಾಲೂಕಿನ ಸೀತನೂರ್ ಮತ್ತು ಭೀಮಳ್ಳಿ ಗ್ರಾಮಗಳು ಸಂಪೂರ್ಣವಾಗಿ ಮುಳುಗಿಹೋಗಿವೆ .
ಜಿಲ್ಲೆಯಲ್ಲಿರುವ ಕಾಗಿನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮಳಖೇಡ ಸೇತುವೆ ಮುಳುಗಿಹೋಗಿದ್ದು ಕಲಬುರಗಿ ಮತ್ತು ಸೇಡಂ ನಗರಗಳಿಗೆ ಸಂಪರ್ಕ ಕಡಿದುಹೋಗಿದೆ . ರೌದ್ರಾವತಿ ನದಿ ಸೃಷ್ಟಿಸಿರುವ ಪ್ರವಾಹದಿಂದಾಗಿ ಕಾಳಗಿ ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮನೆಗಳು ಮುಳುಗಡೆಯಾಗಿವೆ .
ಕಲಬುರಗಿ ನಗರದಲ್ಲೂ ಪೂಜಾ ಕಾಲೊನಿ , ಮತ್ತು ಸುಂದರ ನಗರ ಬಡಾವಣೆಗಳನ್ನು ನೀರು ಆವರಿಸಿದೆ . ಸುಂದರ ನಗರದ ಜಲಾವೃತಗೊಂಡಿದ್ದ ಮನೆಯೊಂದರಲ್ಲಿ ವಿದ್ಯುತ್ ಪ್ರವಹಿಸಿ , 96 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ .
ಎಡೆಬಿಡದೆ ಸುರಿಯುತ್ತಿ ರುವ ವರುಣನ ಆರ್ಭಟಕ್ಕೆ ಕಲಬುರಗಿ ಜನರ ಬದುಕು ತತ್ತರಿಸಿಹೋಗಿದ್ದರೂ , ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ನೆರವಿಗೆ ಬಂದಿಲ್ಲವೆಂದು ಜನ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೈದರಾಬಾದ್-ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಅಂತ ಬದಲಾಯಿಸಿದ್ದು ಬಿಟ್ಟರೆ ಈ ಭಾಗಕ್ಕೆ ಏನೂ ಮಾಡಿಲ್ಲವೆಂದು ಅವರು ಹೇಳುತ್ತಿದ್ದಾರೆ. ಯಾವುದೇ ಪ್ರದೇಶ ನೆರೆ ಹಾವಳಿಗೆ ತುತ್ತಾದಾಗ ಮುಖ್ಯಮಂತ್ರಿ ಮತ್ತು ಆ ನಿರ್ದಿಷ್ಟ ಭಾಗದ ಶಾಸಕರು ಮತ್ತು ಸಂಸದರು ವೈಮಾನಿಕ ಸಮೀಕ್ಷೆ ನಡೆಸುವುದು ವಾಡಿಕೆಯೂ ಹೌದು ಮತ್ತು ಅನಿವಾರ್ಯವೂ ಹೌದು. ಆದರೆ ಮುಖ್ಯಮಂತ್ರಿ ಹಾಗಿರಲಿ, ಯಾವುದೇ ಶಾಸಕ ಕೂಡ ತಮ್ಮ ಕಷ್ಟ ಕೇಳಲು ಬಂದಿಲ್ಲವೆಂದು ಜನ ಹಿಡಿಶಾಪ ಹಾಕುತ್ತಿದ್ದಾರೆ. ರೈತರು ಬೆಳೆದಿದ್ದ ಬೆಳೆಗಳೆಲ್ಲಾ ನೀರಿನಲ್ಲಿ ಕೊಚ್ಚಿಹೋಗಿ ಈ ವರ್ಷ ಬದುಕು ನಡೆಸುವುದು ಹೇಗೆ ಅಂತ ಜನ ಆತಂಕಗೊಂಡಿದ್ದಾರೆ.
ಹವಾಮಾನ ಇಲಾಖೆ ನಾಳೆ ಸಹ ಭೀಕರ ಮಳೆಯಾಗುವ ಮುನ್ಸೂಚನೆ ನೀಡಿದ್ದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ .