ಕೋಲಾರ: ಕೊರೊನಾ ಸೋಂಕಿತ ತನಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಅಗಿರುವ ಘಟನೆ ಕೋಲಾರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋಲಾರದಲ್ಲಿ ಈ ಸೋಂಕಿತನಿಂದ ಸೋಂಕು ಹಬ್ಬುತ್ತಾ ಅನ್ನೋ ಆತಂಕ ಮನೆ ಮಾಡಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವ್ಯಕ್ತಿಯಿಂದ ಸದ್ಯ ಇಂಥಾದೊಂದು ಆತಂಕ ಎದುರಾಗಿದ್ದು, ಕೊರೊನಾ ಸೋಂಕಿತ (ರೋಗಿ-4863) ಜೂನ್ 3 ರಂದು ಆಂಧ್ರದ ತಿರುಪತಿ ತಿರುಮಲದಿಂದ ಕೋಲಾರಕ್ಕೆ ಬಂದಿದ್ದಾನೆ. ತಿರುಮಲದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿಯ ವಾಸವಿ ಹೋಟೆಲ್‍ನಲ್ಲಿ ಕೆಲಸಬೇಕೆಂದು ಕೇಳಿಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ.
ವರದಿ ಬರುತ್ತಿದ್ದಂತೆ ಎಸ್ಕೇಪ್: ವಾಸವಿ ಹೋಟೆಲ್ ಮಾಲೀಕ ಹೊರ ರಾಜ್ಯದಿಂದ ಬಂದಿರುವ ಕಾರಣ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಸ್ಪತ್ರೆ ಎಸ್‍ಎನ್‍ಆರ್ ಗೆ ಹೋಗಿ ಕೋವಿಡ್ ಟೆಸ್ಟ್‍ಗೆ ಗಂಟಲು ದ್ರವ ಮಾದರಿ ನೀಡಿ ಬಂದಿದ್ದು, ಆಸ್ಪತ್ರೆಯ ಸಿಬ್ಬಂದಿ ವಿಳಾಸ ಬರೆದುಕೊಂಡು ವರದಿ ಬರುವವರೆಗೆ ಹೋಮ್ ಕ್ವಾರಂಟೇನ್ ನಲ್ಲಿರುವಂತೆ ಸೂಚಿಸಿದ್ದಾರೆ. ಜೂನ್ 6ರಂದು ಆತನ ವರದಿ ಪಾಸಿಟಿವ್ ಬಂದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಆತ ನೀಡಿದ್ದ ಫೋನ್ ನಂಬರ್‍ಗೆ ಕಾಲ್ ಮಾಡಿ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಗಾಬರಿಗೊಂಡ ಸೋಂಕಿತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಆತನ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆತನನ್ನು ಹುಡಕಾಟ ನಡೆಸುತ್ತಿರುವ ಕೋಲಾರ ಹಾಗೂ ಕೆಜಿಎಫ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.
ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದಂತೆ ಗಾಬರಿಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಆತ ನೀಡಿದ್ದ ವಿಳಾಸವನ್ನು ಪರಿಶೀಲನೆ ಮಾಡಿದಾಗ ಆತ ಬಂಗಾರಪೇಟೆ ವಾಸವಿ ಹೋಟೆಲ್ ಅಡ್ರೆಸ್ ನೀಡಿದ್ದಾನೆ. ಆ ವಿಳಾಸ ಪರಿಶೀಲನೆ ಮಾಡಿದಾಗ ಆ ಹೆಸರಿನ ಹೋಟೆಲ್ ಅಲ್ಲಿ ಇಲ್ಲಾ ಅನ್ನೋದು ತಿಳಿದಿದೆ. ಅಲ್ಲದೆ ಆತ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ವಾಸವಿ ಹೋಟೆಲ್ ನಲ್ಲಿ ಕೆಲಸ ಕೇಳಿಕೊಂಡು ಹೋಗಿದ್ದ ಮಾಹಿತಿ ಲಭ್ಯವಾಗಿದೆ. ಜೊತೆಗೆ ಎರಡು ದಿನಗಳಿಂದ ಆತ ಈ ಹೋಟೆಲ್ ಬಳಿಯೇ ಇದ್ದ ವಿಷಯ ತಿಳಿದಿದೆ.
ಪೊಲೀಸರು ಆತನ ಫೋನ್ ನಂಬರ್ ಪಡೆದು ಪರಿಶೀನೆ ನಡೆಸಿದಾಗ ಆತ ಕೋಲಾರ ನಗರದಲ್ಲಿ ಓಡಾಡಿ, ನಂತರ ಬಂದ ಮಾರ್ಗದಂತೆ ಕೆಜಿಎಫ್ ಮೂಲಕ ಕುಪ್ಪಂ ಹಾದಿಯಲ್ಲಿ ಚಿತ್ತೂರಿಗೆ ತೆರಳಿರುವುದು ಖಚಿತವಾಗಿದೆ. ಈಗಾಗಲೆ ರಾಜ್ಯದ ಕೋಲಾರ, ಕೆಜಿಎಫ್ ಹಾಗೂ ಆಂಧ್ರದ ಚಿತ್ತೂರು, ತಿರುಪತಿ ಜಿಲ್ಲೆಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 2 ರಾಜ್ಯದ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಕಣ್ಣು ತಪ್ಪಿಸಿ ಹೋಗಿರುವ ವ್ಯಕ್ತಿ ಎಲ್ಲೆಲ್ಲಿ ಓಡಾಡ್ತಾನೋ, ಯಾರ ಯಾರಿಗೆ ಸೋಂಕು ಹರಡುತ್ತಾನೋ ಅನ್ನೋ ಭಯ ಸದ್ಯ ಕೋಲಾರದಲ್ಲಿ ಮಾತ್ರವಲ್ಲದೆ ಆಂಧ್ರಪ್ರದೇಶದಲ್ಲೂ ಶುರುವಾಗಿದೆ.