ಬೆಂಗಳೂರು : ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟಲು ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರ ಸಚಿವರಿಗೆ ರಾಜ್ಯಕ್ಕೆ ಪ್ರವೇಶಕ್ಕೆ ಅವಕಾಶ ನೀಡಬಾರದು, ಗಡಿಯಲ್ಲಿಯೇ ಅವರನ್ನು ಬಂಧಿಸಬೇಕು ಎಂದು ಕರ್ನಾಟಕ ರಕ್ಷಣ ವೇದಿಕೆ (ಕರವೇ) ಆಗ್ರಹಿಸಿದೆ.
ಇನ್ನೊಂದೆಡೆ ಕರವೇ ರಾಜ್ಯಾದ್ಯಂತ ತನ್ನ ಕಾರ್ಯಕರ್ತರಿಗೆ ಬೆಳಗಾವಿಗೆ ಆಗಮಿಸುವಂತೆ ಕರೆಕೊಟ್ಟಿದ್ದು, ಬೆಂಗಳೂರಿನಿಂದಲೇ 100ಕ್ಕೂ ಹೆಚ್ಚು ವಾಹನಗಳಲ್ಲಿ ಬೆಳಗಾವಿಗೆ ತೆರಳುತ್ತಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಸಚಿವರು ಆಗಮಿಸುವ ದಿನದಂತೆ ಬೆಳಗಾವಿ ನಗರ ಮತ್ತು ಗಡಿ ಭಾಗಗಳಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಅಲ್ಲದೆ, ಕನ್ನಡ ಸಂಘಟನೆಗಳಿಂದ ಸೋಮವಾರ ಬೆಂಗಳೂರಿನಲ್ಲಿ ಮಹಾರಾಷ್ಟ್ರ ಸಚಿವರ ಆಗಮನ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ನೀಡುತ್ತಿರುವ ಹಿನ್ನೆಲೆ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಸಭೆ ನಡೆಸಿತು.
ಸಭೆ ಬಳಿಕ ಮಾತನಾಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ‘ಬೆಳಗಾವಿ ಹಲವು ಪ್ರದೇಶಗಳನ್ನು ಕಬಳಿಸುವ ಸಂಚನ್ನು ಮಹಾರಾಷ್ಟ್ರ ನಿರಂತರವಾಗಿ ನಡೆಸುತ್ತಿದೆ. ಇದಕ್ಕಾಗಿಯೇ ಡಿ.6ರಂದು ಬೆಳಗಾವಿಯಲ್ಲಿ ಮಹಾರಾಷ್ಟ್ರದ ಸಚಿವರು ಹಾಗೂ ಶಾಸಕರು ಸಭೆಗಳನ್ನು ನಡೆಸಲಿದ್ದಾರೆ. ಸಭೆಗೆ ಬಂದ ಸಂದರ್ಭದಲ್ಲಿ ಕರ್ನಾಟಕವನ್ನು ಅವರು ಹೀಯಾಳಿಸುತ್ತಾರೆ. ಅಲ್ಲದೇ ಕನ್ನಡಿಗರನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾರೆ. ಮರಾಠಿಗರು-ಕನ್ನಡಿಗರ ನಡುವೆ ಎತ್ತಿಕಟ್ಟುತ್ತಾರೆ. ಹೀಗಾಗಿ, ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ಅವಕಾಶ ನೀಡಬಾರದು. ಗಡಿಯಲ್ಲಿ ಅವರನ್ನು ಬಂಧಿಸಬೇಕು ಅಥವಾ ವಾಪಸ್ ಕಳುಹಿಸಬೇಕು ಎಂದು ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಒತ್ತಾಯಿಸಿದರು.