ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಲಾಕ್ಡೌನ್ ಜಾರಿಯಾಗಿದೆ. ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಸುಖಾಸುಮ್ಮನೆ ವಾಹನಗಳಲ್ಲಿ ರಸ್ತೆಗಿಳಿಯದಂತೆ ಸೂಚಿಸಲಾಗಿದೆ. ಆದ್ರೂ ನಿಯಮ ಉಲ್ಲಂಘಿಸಿ ಕುಂಟು ನೆಪಗಳನ್ನ ಹೇಳಿಕೊಂಡು ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಜೊತೆಗೆ ವಾಹನಗಳನ್ನ ಸೀಜ್ ಮಾಡ್ತಿದ್ದಾರೆ.
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗಳಿದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಜನರು ಅನಾವಶ್ಯಕ ಓಡಾಡೋದಲ್ಲದೆ ಪೊಲೀಸರ ಜೊತೆ ವಾಗ್ವಾದ ಮಾಡ್ತಿದ್ದಾರೆ. ಯಶವಂತಪುರ ಸರ್ಕಲ್ ಬಳಿ ಬೈಕ್, ಕಾರ್ ಸೇರಿ 20ಕ್ಕೂ ಹೆಚ್ಚು ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ. ಹೊಸಪೇಟೆಯ ಟಿಬಿ ಡ್ಯಾಂ ರಸ್ತೆಯಲ್ಲಿರೋ ಎಪಿಎಂಸಿ ಸರ್ಕಲ್ ಬಳಿ
30 ಕ್ಕೂ ವಾಹನಗಳನ್ನ, ಕೆ.ಆರ್ ಮಾರ್ಕೆಟ್ ಬಳಿ 10ಕ್ಕೂ ಅಧಿಕ ಆಟೋಗಳನ್ನ ಜಪ್ತಿ ಮಾಡಿದ್ದಾರೆ.
ಬಾಗಲಕೋಟೆ: ರಾಜ್ಯದಲ್ಲಿ ಬಿಗಿ ಲಾಕ್ಡೌನ್ ಇರೋ ಹಿನ್ನೆಲೆಯಲ್ಲಿ, ತಾಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ಫೀಲ್ಡ್ಗಿಳಿದ ಕಲಾದಗಿ ಪೊಲೀಸ್ರು ಸುಮಾರು 40ಕ್ಕೂ ಅಧಿಕ ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ. ಕಲಾದಗಿ ಪಿ.ಎಸ್.ಐ ರವಿ ಪವಾರ್ ನೇತೃತ್ವದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗ್ತಿದೆ. ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಗದ್ದನಕೇರಿ ಕ್ರಾಸ್ ಬಳಿ ಬ್ಯಾರಿಕೇಡ್ ಅಳವಡಿಸಿ, ಅನಗತ್ಯವಾಗಿ ರಸ್ತೆಗಿಳಿದ ಬೈಕ್ಗಳನ್ನ ವಶಕ್ಕೆ ಪಡೆಯಲಾಗ್ತಿದೆ. ಅಗತ್ಯ ವಸ್ತು ಖರೀದಿಗೆ ಬಂದ ಪಾದಚಾರಿಗಳಿಗೆ ಮಾತ್ರ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗ್ತಿದೆ.
