ಚಿಕ್ಕಮಗಳೂರು: ಸ್ಯಾಂಡಲ್‍ವುಡ್ ನಟರು ಹಾಗೂ ಸಹೋದರರು ಅದ ನಟ ಜಗ್ಗೇಶ್ ಹಾಗೂ ಕೋಮಲ್ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ವಿನಯ್ ಗುರೂಜಿಯ ಭೇಟಿಗೆ ಬಂದು ಸ್ಯಾಂಡಲ್‍ವುಡ್ ಸಹೋದರರು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪಂಚಪೀಠಗಳಲ್ಲೇ ಮೊದಲನೇ ಪೀಠ ರಂಭಾಪುರಿ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.ಮಠದ ಆವರಣದಲ್ಲಿ ಸ್ವಲ್ಪ ಹೊತ್ತು ಕಾಲಕಳೆದ ಚಂದನವನದ ಸಹೋದರರು ರಂಭಾಪುರಿ ಶ್ರೀಗಳ ಆಶೀರ್ವಾದದ ಬಳಿಕ ಕೆಲ ಹೊತ್ತು ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಮಠದ ಆವರಣದಲ್ಲಿ ಕಾಲಕಳೆದಿದ್ದಾರೆ. ಮಠದ ಆವರಣದಲ್ಲಿರೋ ಶಕ್ತಿಮಾತೆ ಚೌಡೇಶ್ವರಿ, ರೇಣುಕಾಚಾರ್ಯ ಮಂದಿರ, ವೀರಭದ್ರಸ್ವಾಮಿ ದೇವಾಲಯ, ಜೀವನ್ಮುಕ್ತಿ ಸ್ಥಳ ಹಾಗೂ ಮಠದ ಆವರಣದಲ್ಲಿ ವಿಭೂತಿಯಲ್ಲಿ ಬರೆದ ಬಸವಣ್ಣ ಅದೇ ಆಕಾರದಲ್ಲಿ ಬೆಳೆಯುತ್ತಿದ್ದು, ಆ ಹರಕೆಯ ನಂದಿಯ ದರ್ಶನ ಪಡೆದಿದ್ದಾರೆ.
ಮಠದ ಆವರಣದಲ್ಲಿನ ಎಲ್ಲಾ ದೇವಾಲಗಳಿಗೂ ಭೇಟಿ ಕೊಟ್ಟ ಜಗ್ಗೇಶ್ ಸಹೋದರರು ಮಠದಲ್ಲಿ ಕಾಫಿ ಕುಡಿದು, ರಂಭಾಪುರಿ ಶ್ರೀಗಳ ದರ್ಶನ ಪಡೆದಿದ್ದಾರೆ. ರಂಭಾಪುರಿ ಮಠದ ಬಳಿಕ ವಿನಯ್ ಗುರೂಜಿಯವರ ದರ್ಶನಕ್ಕಾಗಿ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ತೆರಳಿದ್ದಾರೆ.