ಬೆಂಗಳೂರು: ಬಹುಕೋಟಿ ಐಎಂಎ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಇಂದು ಬೆಂಗಳೂರಿನ ಜಯನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮಾನತುಗೊಂಡಿದ್ದ ವಿಜಯ್ ಶಂಕರ್ 20 ದಿನಗಳ ಹಿಂದೆ ಕೆಲಸಕ್ಕೆ ಮರಳಿದ್ದರು. ಇಂದು ಬೆಳಗ್ಗೆ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ.

1.5 ಕೋಟಿ ಲಂಚದ ಆರೋಪ: ಐಎಂಎ ಪ್ರಕರಣದಲ್ಲಿ 1.5 ಕೋಟಿ ರೂ. ಲಂಚ ಪಡೆದ ಆರೋಪ ವಿಜಯ್ ಶಂಕರ್ ಮೇಲಿತ್ತು. ಪ್ರಕರಣ ಸಂಬಂಧ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್‍ಐಟಿ ತಂಡವು ವಿಜಯ್ ಶಂಕರ್ ಅವರನ್ನು ಬಂಧಿಸಿದೆ. ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸುವ ವೇಳೆ ಪ್ರಕರಣ ಎಸ್‍ಐಟಿಯಿಂದ ಸಿಬಿಐಗೆ ವರ್ಗಾವಣೆಯಾಗಿತ್ತು. ಸಿಬಿಐ ಸಹ ವಿಜಯ್ ಶಂಕರ್ ಅವರನ್ನ ಬಂಧಿಸಿತ್ತು.

ಬಂಧನದ ಭೀತಿ: ಎಸ್.ಐ.ಟಿ ಕೇಸ್ ನಲ್ಲಿ 16 ಆರೋಪಿಯಾಗಿದ್ದ ವಿಜಯ್ ಶಂಕರ್, ಕೇಸ್ ಸಿಬಿಐಗೆ ವರ್ಗಾವಣೆಯಾದ ನಂತರ 4ನೇ ಆರೋಪಿಯಾಗಿದ್ದರು. ಕೆಲ ದಿನಗಳ ಹಿಂದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಪ್ರಾಷಿಕ್ಯೂಷನ್ ಗೆ ಸರ್ಕಾರ ಅನುಮತಿ ನೀಡಿದೆ ಎಂಬ ಭಯದಲ್ಲಿದ್ದ ವಿಜಯ್ ಶಂಕರ್, ಇದರಿಂದ ತಪ್ಪಿಸಿಕೊಳ್ಳಲು ಪದೇ ಪದೇ ವಿಧಾನಸೌಧಕ್ಕೂ ಭೇಟಿ ನೀಡಿದ್ದರು ಎಂದು ತಿಳಿದ ಬಂದಿದೆ. ಈಗ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆಗಳು ವ್ಯಕ್ತವಾಗಿವೆ.

ಇಂದು ಬೆಳಗ್ಗೆ 10:30 ರಿಂದ 12 ಗಂಟೆಯವರೆಗೂ ಸಭೆ ನಡೆಸಿದ್ದ ವಿಜಯ್ ಶಂಕರ್ ಮಧ್ಯಾಹ್ನ 12:30ಕ್ಕೆ ಕಚೇರಿಯಿಂದ ಹೊರ ಬಂದಿದ್ದರು. ಮನೆಗೆ ಬಂದಿದ್ದ ವಿಜಯ್ ಶಂಕರ್, ಸಂಜೆ ಸುಮಾರು 7 ಗಂಟೆಗೆ ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ವೇಳೆ ಮನೆಯಲ್ಲಿ ವಿಜಯ್ ಶಂಕರ್ ಪತ್ನಿ ಹಾಗೂ ಪುತ್ರಿ ಇದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ತಿಲಕ ನಗರ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
Laxmi News 24×7