ಹುಬ್ಬಳ್ಳಿ: ಫೇಸ್‍ಬುಕ್ ನಲ್ಲಿ ಅಗ್ಗದ ಐಫೋನ್ ಜಾಹೀರಾತು ನೋಡಿ ವ್ಯಕ್ತಿಯೊಬ್ಬ ಆರ್ಡರ್ ಮಾಡುವ ಮೂಲಕ 20 ಸಾವಿರ ವಂಚನೆಗೆ ಒಳಗಾಗಿದ್ದಾನೆ. ಆನ್‍ಲೈನ್‍ನಲ್ಲಿ ಐಪ್ಯಾಡ್, ಐವಾಚ್, ಐಫೋನ್ ಆರ್ಡರ್ ಮಾಡಿದ ವ್ಯಕ್ತಿಗೆ ಕೊರಿಯರ್ ಹಾಗೂ ರಿಜಿಸ್ಟ್ರೇಷನ್ ಶುಲ್ಕದ ನೆಪದಲ್ಲಿ ಆನ್‍ಲೈನ್ ಕಳ್ಳ 20 ಸಾವಿರ ಪಡೆದು ವಂಚಿಸಿದ್ದಾನೆ.
ಧಾರವಾಡದ ಪವನಕುಮಾರ್ ವಂಚನೆಗೆ ಒಳಗಾಗಿದ್ದು, ಪವನಕುಮಾರ್ ಅವರು ಮೊಬೈಲ್ ನಲ್ಲಿ ಫೇಸ್‍ಬುಕ್ ನೋಡುತ್ತಿದ್ದಾಗ ಬ್ಲಿಂಕ್ ಆಗುತ್ತಿದ್ದ, `ಐ ಫೋನ್ ಅಟ್ ಚೀಪೆಸ್ಟ್ ಪ್ರೈಸ್’ ಎಂಬ ಜಾಹೀರಾತು ಲಿಂಕ್ ಓಪನ್ ಮಾಡಿದ್ದಾರೆ. ಅಲ್ಲಿದ್ದ ಮೊಬೈಲ್ ಸಂಖ್ಯೆ ಪಡೆದು ವಾಟ್ಸಪ್ ಮೂಲಕ ಅಪರಿಚಿತನೊಂದಿಗೆ ಚಾಟ್ ಮಾಡಿ ಐಪ್ಯಾಡ್, ಐವಾಚ್, ಐಫೋನ್ ಹಾಗೂ ಇಯರ್ ಫೋನ್‍ಗೆ ಆರ್ಡರ್ ಮಾಡಿದ್ದಾರೆ.
ಆರ್ಡರ್ ಬಳಿಕ, ಉತ್ಪನ್ನಗಳ ಕೊರಿಯರ್ ಹಾಗೂ ನೋಂದಣಿ ಶುಲ್ಕವಾಗಿ ಪಾವತಿಸಬೇಕು ಎಂದು ಅಪರಿಚಿತ ಹೇಳಿದ್ದಾನೆ. ಪವನಕುಮಾರ್ ನೀಡಿದ ಮಾಹಿತಿ ಮೇರೆಗೆ, ಅವರ ಕೆನರಾ ಮತ್ತು ಎಸ್‍ಬಿಐ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 5 ಸಾವಿರ ಮತ್ತು 15 ಸಾವಿರ ಸೇರಿ, ಒಟ್ಟು 20 ಸಾವಿರವನ್ನು ಆನ್‍ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ನಂತರ ಉತ್ಪನ್ನಗಳನ್ನು ಡೆಲಿವರಿ ಮಾಡದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾನೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.