ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಯೊಳಗೆ ಜನಪ್ರತಿಗಳು, ಅಧಿಕಾರಿಗಳ ಜೊತೆ ಸಾರ್ವಜನಿಕರು ವಾಕ್ಸಮರ ನಡೆಸಿ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ, ಕೆಂಬಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆಂಬಾಳು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಿಂದ ಶುಲ್ಕ ವಿಧಿಸುವ ಸಲುವಾಗಿ ತೀರ್ಮಾನ ತೆಗೆದುಕೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಇದಕ್ಕೆ ಅಪಸ್ವರ ವ್ಯಕ್ತಪಡಿಸಿದ ಅಂಗಡಿ ಮಾಲೀಕರು, ಸ್ಥಳೀಯರು ಪಂಚಾಯಿತಿಯಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಈ ವೇಳೆ ಗ್ರಾಮಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷನ ವಿರುದ್ಧ ಸಭೆಯಲ್ಲಿ ಸೇರಿದ್ದವರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆದು ಪರಸ್ಪರ ಹಲ್ಲೆ ಕೂಡ ನಡೆಸಿ, ಕಿತ್ತಾಡಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನುಗ್ಗೇಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.