ಬೆಳಗಾವಿ: ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಬಲೆಗೆ ಬೀಳಿಸಿ ಹನಿಟ್ರ್ಯಾಪ್ ಮೂಲಕ ಮೋಸ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿಯ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು, ನಂತರ ಲಾಡ್ಜ್ಗೆ ಕರೆಸಿ ಹಣ, ಚಿನ್ನ ಸೇರಿದಂತೆ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದ ಆರೋಪ ಆಕೆಯ ಮೇಲೆ ಇದೆ.
ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಎಂದು ಗುರುತಿಸಲಾಗಿದೆ. ಫ್ಯಾಶನ್ ಡಿಸೈನರ್ ಆಗಿದ್ದ ಆಕೆ ಹಣದಾಸೆಗೆ ಬಿದ್ದು ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಈ ಮೋಸವನ್ನು ನಡೆಸುತ್ತಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ದೀಪಾ ಮೊದಲು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಸಂದೇಶಗಳ ಮೂಲಕ ಸಂಪರ್ಕ ಸಾಧಿಸಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು. ಆಕೆಯನ್ನು ನಂಬಿ ಬಂದ ವ್ಯಕ್ತಿಗಳೊಂದಿಗೆ ಆತ್ಮೀಯವಾಗಿ ವರ್ತಿಸಿ, ಅವರನ್ನು ಸ್ನಾನಕ್ಕೆ ಕಳುಹಿಸುತ್ತಿದ್ದಳು. ಈ ವೇಳೆ ಅವರ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಮತ್ತು ಕೆಲವೊಮ್ಮೆ ಕಾರುಗಳನ್ನೇ ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ಸಹಾಯ ಮಾಡುತ್ತಿದ್ದ ಆಪ್ತ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ. ಶ್ರೀಮಂತ ವ್ಯಕ್ತಿಗಳ ಮಾಹಿತಿ ನೀಡುವುದರಲ್ಲಿ ಅವನು ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿಯಾಗಿರುವ ಶಿವಾನಂದನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಂಧನದ ಬಳಿಕ ಆರೋಪಿಯಿಂದ ಒಟ್ಟು 32 ಲಕ್ಷ 86 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, 3 ಕಾರಿನ ಕೀಗಳು ಹಾಗೂ 14 ಸಾವಿರ ರೂ. ನಗದು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
Laxmi News 24×7