ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಭಾರೀ ಹೆಚ್ಚಳವಾಗಿದೆ. ದಿನೇ ದಿನೇ ಸೂರ್ಯನ ತಾಪ ಹೆಚ್ಚಾಗುತ್ತಿದ್ದು, ಜನರು ಹೊರಗೆ ಓಡಾಡುವುದೇ ಕಷ್ಟವಾಗಿದೆ. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಪ್ರತ್ಯೇಕ ವಾರ್ಡ್ ಆರಂಭ ಮಾಡಿದೆ.
ಯಾದಗಿರಿ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಸುಡುಬಿಸಿಲಿಗೆ ಜನರು ಮಧ್ಯಾಹ್ನದಿಂದ ಸಂಜೆವರಗೆ ಹೆಚ್ಚಿನ ಪ್ರಮಾಣದಲ್ಲಿ ಓಡಾಡದಂತಾಗಿದೆ. ಸೂರ್ಯನ ತಾಪಕ್ಕೆ ನವಜಾತ ಶಿಶುಗಳಿಗೆ ನಿರ್ಜಲೀಕರಣ ಸಮಸ್ಯೆ ಹಾಗೂ ವಯಸ್ಕರಿಗೆ ಕೂಡ ಅನಾರೋಗ್ಯ ಉಂಟಾಗುತ್ತಿದೆ. ಬಿಸಿಲಘಾತಕ್ಕೆ ತುತ್ತಾದವರಿಗೆ ಅಗತ್ಯ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಬಿಸಿಗಾಳಿ ಹೆಚ್ಚಳದಿಂದ ಜನರಿಗೆ ಅನಾರೋಗ್ಯ ಉಂಟಾಗಲಿದೆ. ಜನರು ಬಿಸಿಲಿಗೆ ಮೈಯೊಡ್ಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಮಧ್ಯಾಹ್ನದಿಂದ ಸಂಜೆವರೆಗೆ ಅನಗತ್ಯ ಹೊರಹೋಗುವದನ್ನು ತಪ್ಪಿಸಿಕೊಳ್ಳಬೇಕಿದೆ. ಜನರು ಪದೇ ಪದೇ ನೀರು, ಮಜ್ಜಿಗೆ, ಎಳೆ ನೀರು ಸೇವಿಸಿ ದೇಹ ತಂಪಾಗಿಸಿಕೊಳ್ಳಬೇಕಿದೆ. ಜನರು ಬಿಸಿಲಿನ ತಾಪದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳಿಗೆ ಅನಾರೋಗ್ಯ ಉಂಟಾದರೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ಶುದ್ಧ ನೀರು ಸೇವಿಸಬೇಕೆಂದು ಡಿಎಚ್ ಓ ಡಾ.ಮಹೇಶ್ ಬಿರಾದಾರ ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ಓಆರ್ಎಸ್ ಪೌಡರ್ ಸೇರಿ ಅಗತ್ಯ ಔಷಧಗಳನ್ನು ಸಂಗ್ರಹ ಮಾಡಿ ಇಟ್ಟಿಕೊಂಡಿದ್ದಾರೆ. ಯಾದಗಿರಿ ಯೀಮ್ಸ್ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ಗೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಸಿಬ್ಬಂದಿ ವರ್ಗದವರು ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. ಹೀಟ್ ಸ್ಟ್ರೋಕ್ ಆದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಡಲಾಗುತ್ತದೆ ಎಂದು ಯೀಮ್ಸ್ ವೈದ್ಯ ಡಾ.ಸಂತೋಷ್ ಅವರು ತಿಳಿಸಿದ್ದಾರೆ
Laxmi News 24×7