ಹುಬ್ಬಳ್ಳಿ: ವೈನ್ ಶಾಪ್ ತೆರೆಯಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿಯನ್ನ ಎಸಿಬಿ ಬಲೆಗೆ ಬಿದಿದ್ದಾರೆ. ಜಿಲ್ಲೆಯ ವರೂರು ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಬಡಿಗೇರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.
ಗ್ರಾಮದ ‘ಗಾಯತ್ರಿ ವೈನ್ಸ್’ ಮುಚ್ಚಿಸಲು ಮಹಿಳಾ ಸಂಘದವರು, ಗ್ರಾಮಸ್ಥರು ಅರ್ಜಿ ಕೊಟ್ಟಿದ್ದರು. ಇದನ್ನೇ ಹಣ ಪೀಕಲು ಬಳಸಿಕೊಂಡ ಪಿಡಿಒ ಬಸವರಾಜ್, ಗ್ರಾಮಸ್ಥರು ನೀಡಿರುವ ಅರ್ಜಿ ತಿರಸ್ಕಾರ ಮಾಡಿ ವೈನ್ ಶಾಪ್ ತೆರಯಲು ತೊಂದರೆ ಇಲ್ಲದಂತೆ ಮಾಡಲು 50 ಸಾವಿರ ರೂ. ನೀಡುವಂತೆ ಶಾಪ್ ಮ್ಯಾನೇಜರ್ ಬಳಿ ಬೇಡಿಕೆ ಇಟ್ಟಿದ್ದ.
ಮೊದಲು ಈ ಬಗ್ಗೆ ಶಾಪ್ ಮ್ಯಾನೇಜರ್ ಗಮನ ನೀಡದ ಸಂದರ್ಭದಲ್ಲಿ ಪದೇ ಪದೇ ಫೋನ್ ಮಾಡಿ ಈ ಬಗ್ಗೆ ಪಿಡಿಒ ಎಚ್ಚರಿಕೆ ನೀಡಿದ್ದ. ಅಲ್ಲದೇ ನೇರ ಶಾಪ್ ಬಳಿ ತೆರಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂದರ್ಭದಲ್ಲಿ ಮ್ಯಾನೇಜರ್ ವಿಶಾಲ್ ಕಲಾಲ್ ಪಿಡಿಒ ಬಳಿ ಮನವಿ ಮಾಡಿ 40 ಸಾವಿರ ರೂ. ನೀಡುವುದಾಗಿ ಒಪ್ಪಿಸಿದ್ದರು.
ಇತ್ತ ವಿಶಾಲ್ ಕಲಾಲ್ ತಮ್ಮ ಸಮಸ್ಯೆಯನ್ನು ತಿಳಿಸಿ ಎಸಿಬಿಯ ಮೊರೆ ಹೋಗಿದ್ದರು. ಇದರಂತೆ ಇಂದು ಹಣ ಲಂಚ ಪಡೆಯುವಾಗ ಹುಬ್ಬಳ್ಳಿಯ ಕಾರವಾರ ರಸ್ತೆ ಗಣೇಶ್ ವೇ ಬ್ರಿಜ್ ಹತ್ತಿರ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಪಿಡಿಒ ಸಿಕ್ಕಿದಿದ್ದಾನೆ. ಎಸಿಬಿ ಡಿವೈಎಸ್‍ಪಿ ವಿಜಯಕುಮಾರ ಬಿಸ್ನಳಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.