ನವದೆಹಲಿ, ಏ.27-ಕೊರೊನಾದಿಂದ ದೇಶದಲ್ಲಿ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇನ್ನೊಂದೆಡ ಆರ್ಥಿಕ ಚಟುವಟಿಕೆಗೆ ಭಾರೀ ಹೊಡೆತ ಬಿದ್ದಿದೆ. ಇದರಿಂದ ಎಲ್ಲಾ ಕ್ಷೇತ್ರಗಳು ಕಂಗೆಟ್ಟಿವೆ.
ಪ್ರಸ್ತುತ ಆರ್ಥಿಕ ಸಂಕಷ್ಟ ಸ್ಥಿತಿಯನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ವಲಯಗಳಿಗೆ ಆರು ತಿಂಗಳ ಮಟ್ಟಿಗೆ ಸರಕುಗಳು ಮತ್ತು ಸೇವಾ ತೆರಿಗೆಗಳು (ಜಿಎಸ್‍ಟಿ) ವಿನಾಯಿತಿ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಹೋಟೆಲ್, ರೆಸ್ಟೋರೆಂಟ್‍ಗಳು, ರಿಯಲ್ ಎಸ್ಟೇಟ್‍ಗಳು, ಏರ್‍ಲೈನ್ಸ್ ಸೇರಿದಂತೆ ವಿವಿಧ ವಲಯಗಳಿಗೆ ಆರು ತಿಂಗಳು ಜಿಎಸ್‍ಟಿ ವಿನಾಯಿತಿ ನೀಡುವ ಬಗ್ಗೆ ಅಥವಾ ಅದನ್ನು ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಆರ್ಥಿಕ ಚೇತರಿಕೆಗಾಗಿ ಕೇಂದ್ರ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಅದೇ ರೀತಿ ಜಿಎಸ್‍ಟಿಗೆ ವಿನಾಯಿತಿ ನೀಡಿದರೆ ಖರೀದಿ ಮತ್ತು ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಹಣಕಾಸು ಪ್ರವಹಿಸುತ್ತದೆ ಎಂಬ ಕಾರಣಕ್ಕಾಗಿ ಸರ್ಕಾರದ ಹಣಕಾಸು ಮತ್ತು ವಾಣಿಜ್ಯ ಇಲಾಖೆ ಅತಿ ಶೀಘ್ರವೇ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ಮಹತ್ವದ ತೀರ್ಮಾನ ಕೈಗೊಳ್ಳುವುದಕ್ಕೆ ಮುನ್ನ ಜಿಎಸ್‍ಟಿ ಮಂಡಳಿ ಜೊತೆ ಸರ್ಕಾರ ಚರ್ಚಿಸಿ ಆರು ತಿಂಗಳ ವಿನಾಯಿತಿ ನೀಡಬೇಕೇ ಅಥವಾ ಜಿಎಸ್‍ಟಿಯನ್ನು ಕಡಿಮೆ ಮಾಡಬೇಕೇ ಎಂಬ ನಿರ್ಧಾರ ಕೈಗೊಳ್ಳಲಿದೆ.ಲಾಕ್‍ಡೌನ್‍ನಿಂದ ದೇಶದ ಬಹುತೇಕ ವಾಣಿಜ್ಯ ಮತ್ತು ವಹಿವಾಟು ಸ್ಥಗಿತಗೊಂಡಿದ್ದು, ಈ ಸಂಕಷ್ಟ ಸನ್ನಿವೇಶದಲ್ಲಿ ಜಿಎಸ್‍ಟಿ ವಾವತಿಸಿ ವ್ಯವಹಾರ ನಡೆಸುವುದು ಕಷ್ಟ ಎಂದು ಬಹುತೇಕ ವಲಯಗಳು ಕೇಂದ್ರ ಸರ್ಕಾರಕ್ಕೆ ಈಗಾಗಲೆ ಮಾಡಿರುವ ಮನವಿ ಮಾಡಿವೆ.