ಗೋಕಾಕ: ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಾಲೂಕಿನ ಲೋಳಸೂರ ಗ್ರಾಮದ ಹುತಾತ್ಮ ಯೋಧ ಕಲ್ಲಪ್ಪ ಸಿದ್ದಪ್ಪ ಬಾಂವಚಿ (45) ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮಧ್ಯಾಹ್ನ 12.30ಕ್ಕೆ ನೆರವೇರಿಸಲಾಯಿತು.ಬುಧವಾರದಂದು ಬೆಳಿಗ್ಗೆ 11.00ಕ್ಕೆ ಯೋಧ ಕಲ್ಲಪ್ಪ ಅವರ ಪಾರ್ಥಿವ ಶರೀರ ಗೋವಾ ಮಾರ್ಗವಾಗಿ ಲೋಳಸೂರ ಗ್ರಾಮಕ್ಕೆ ತಲುಪಿತು. ಅವರ ಜಮೀನಿನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ನೂರಾರು ಜನ ಆಗಮಿಸಿ ಅಂತಿಮ ದರ್ಶನ ಪಡೆದರು.
ಯೋಧ ಕಲ್ಲಪ್ಪ ಬಾಂವಚಿ ಪ್ರಾಥಮಿಕ ಲೋಳಸೂರ ಹಾಗೂ ಪ್ರೌಢಶಿಕ್ಷಣವನ್ನು ಗೋಕಾಕ ಪಟ್ಟಣದಲ್ಲಿ ಮುಗಿಸಿ. 2000ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆಗೆ ಸೇರಿದ್ದರು. ಸುಮಾರು 20ವರ್ಷಗಳ ಕಾಲ ಸೇನೆಯಲ್ಲಿ ದೇಶದ ವಿವಿಧ ಗಡಿಭಾಗಗಳಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಸೇವೆ ಗೈದಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಯೋಧನ ಪಾರ್ಥಿವ ಶರೀರ ಕಂಡು ಕುಟುಂಬಸ್ತರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಜಾವೇದ ಇನಾಮದಾರ, ತಾಪಂ ಸದಸ್ಯ ಕಿರಣ ಬೆಣಚಿನಮರ್ಡಿ, ಮುಖಂಡರಾದ ಸಿದ್ದಪ್ಪ ನಿಡಗುಂದಿ, ರಾಮಪ್ಪ ಬೆಣಚಿನಮರ್ಡಿ, ಪ್ರಕಾಶ ಮೇಟಿ, ಮನೋಹರ ಗಡಾದ, ಹಾಲಪ್ಪ ಬಾಗಾಯಿ ಸೇರಿದಂತೆ ಗಣ್ಯರು ಇದ್ದರು.