ಬೆಳಗಾವಿ: ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಬೆಳಗಾವಿಯಲ್ಲಿ ಈಗ ಮತ್ತೆರಡು ಕುಡಿಗಳು ರಾಜಕೀಯ ಪ್ರವೇಶ ಮಾಡಲು ತಯಾರಾಗಿದ್ದು, ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.
ರಮೇಶ ಜಾರಕಿಹೊಳಿ ಪುತ್ರ ಅಮರನಾಥ ರಾಜಕೀಯ ಪ್ರವೇಶಿಸಿದ ಬೆನ್ನಲ್ಲೇ ಸತೀಶ್ ಜಾರಕಿಹೊಳಿಯ ಮಕ್ಕಳು ಇದೇ ಹಾದಿಯಲ್ಲಿದ್ದಾರೆ. 3 ದಶಕಗಳಿಂದ ರಾಜಕೀಯದಲ್ಲಿರುವ ಸತೀಶ್ ಈಗ ಮಕ್ಕಳಾದ ರಾಹುಲ್ ಹಾಗೂ ಪ್ರಿಯಂಕಾ ಅವರನ್ನು ರಾಜಕೀಯಕ್ಕೆ ಸಿದ್ಧಗೊಳಿಸುತ್ತಿದ್ದಾರೆ.
ಇದೇ ಉದ್ದೇಶದಿಂದ ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಕನಿಷ್ಠ ಐದು ವರ್ಷ ಅವರು ಸಾಮಾಜಿಕ ಸೇವೆ ಮಾಡಬೇಕು ಎಂಬುದು ಅಪ್ಪ ಸತೀಶ್ ಲೆಕ್ಕಾಚಾರ. ಉನ್ನತ ವ್ಯಾಸಂಗ ಮಾಡುತ್ತಿರುವ ರಾಹುಲ್ ಹಾಗೂ ಪ್ರಿಯಾಂಕಾ ಒಂದು ವರ್ಷದಿಂದ ಸಾಮಾಜಿಕ ಚಟುವಟಿಕೆಗಳಲ್ಲಿದ್ದಾರೆ.
ಮಕ್ಕಳು ರಾಜಕೀಯಕ್ಕೆ ಬರಲು ಇನ್ನೂ ಸಮಯ ಇದೆ. ಆದರೆ ರಾಜಕೀಯಕ್ಕೆ ಬರುವುದು ಖಚಿತ. ರಾಜಕಾರಣ ನಾವು ಅಂದುಕೊಂಡಷ್ಟು ಸುಲಭವಲ್ಲ. ಮೊದಲಿನ ಸ್ಥಿತಿ ಈಗಿಲ್ಲ. ಎಲ್ಲ ರೀತಿಯ ಅನುಭವ ಬೇಕು. ಅದೇ ಕಾರಣದಿಂದ ಮಕ್ಕಳಿಗೆ ಸಾಮಾಜಿಕ ಸೇವೆ ಹಾಗೂ ಜನರ ಜತೆ ಬೆರೆಯುವುದನ್ನು ಕಲಿಸಲಾಗುತ್ತಿದೆ ಎನ್ನುತ್ತಿದ್ದಾರೆ ಸತೀಶ್ ಜಾರಕಿಹೊಳಿ. ಏನೇ ಆದರೂ ಜಾರಕಿಹೊಳಿ ಸಹೋದರರ ನಡೆ ಹೊಸ ಕುತೂಹಲಕ್ಕಂತೂ ನಾಂದಿ ಹಾಡಿದೆ.
ಅಮರನಾಥ ಮೇಲೆ ಕುತೂಹಲ
ಕೆಎಂಎಫ್ ನಿರ್ದೇಶಕರಾಗಿರುವ ಅಮರನಾಥ ಜಾರಕಿಹೊಳಿ ಈಗ ಸಹಕಾರ ಕ್ಷೇತ್ರದಿಂದ ರಾಜಕೀಯದತ್ತ ಗಮನ ಹರಿಸಿದ್ದಾರೆ. ರಮೇಶ ಜಾರಕಿಹೊಳಿ ಪುತ್ರರಾಗಿ ರುವ ಅವರ ಹೆಸರು ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಕೇಳಿ ಬರುತ್ತಿದೆ. ಪುತ್ರನನ್ನು ರಾಜಕೀಯದಲ್ಲಿ ಬೆಳೆಸಬೇಕು ಎಂಬ ಉದ್ದೇಶದಿಂದ ರಮೇಶ ಜಾರಕಿಹೊಳಿ ಅವರು ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಿಸುತ್ತಿದ್ದು, ಇದು ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಜತೆಗೆ ಈಗಲೇ ಟಿಕೆಟ್ ಕೊಡಿಸಿದರೆ ಎಲ್ಲಿ ತಪ್ಪು ಸಂದೇಶ ಹೋಗುವುದೋ ಎಂಬ ಭೀತಿಯೂ ರಮೇಶ್ ಜಾರಕಿಹೊಳಿಯವರಲ್ಲಿದೆ ಎನ್ನಲಾಗುತ್ತಿದೆ.
ಸ್ಪರ್ಧಿಸೋದಿಲ್ಲ: ಅಮರನಾಥ
ಬೆಳಗಾವಿ: ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈಗ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ ಎಂದು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯವಾಗಿ ಬೆಳೆಯಲು ಇನ್ನೂ ಸಮಯವಿದೆ. ನಾನು ಈಗಷ್ಟೇ ಬಿಜೆಪಿ ಸೇರಿದ್ದೇನೆ. ಕಾರ್ಯಕರ್ತನಾಗಿ ಸಾಕಷ್ಟು ಕೆಲಸ ಮಾಡಿ ಪಕ್ಷವನ್ನು ಸಂಘಟಿಸಬೇಕಿದೆ ಎಂದಿದ್ದಾರೆ.