ಗೋಕಾಕ:ರಸ್ತೆಗಿಳಿದವರ ಮೇಲೆ ಲಾಠಿ ಏಟು, ಪೊಲೀಸರ ವರ್ತನೆಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ
ಲಾಕ್‌ಡೌನ್ ಸಂದರ್ಭದಲ್ಲಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿಯಲ್ಲಿ ಹಿಗ್ಗಾಮುಗ್ಗ ಥಳಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಸಾಮಾಜಿಕ ಹೋರಾಟಗಾರರು, ಬರಹಗಾರರು ಮಾತ್ರವಲ್ಲದೆ ಸಾರ್ವಜನಿಕರು ಪೊಲೀಸರ ನಡೆಯನ್ನು ಖಂಡಿಸುತ್ತಿದ್ದಾರೆ.
ಕೋವಿಡ್ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ಅಪರಾಧಿಗಳಂತೆ ನಡೆಸಿಕೊಂಡು ಶಿಕ್ಷೆ ಕೊಡಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
‘ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ. ಈ ಎರಡನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನಿಯಮ ಮೀರಿ ಹೊರಗೆ ಓಡಾಡುವ ಸಂದರ್ಭದಲ್ಲಿ ಕರ್ನಾಟಕದ ಪೊಲೀಸರು ಅವರನ್ನು ಸೌಜನ್ಯದಿಂದ ವಿಚಾರಿಸಿ, ಅವರು ನಿಯಮ ಮೀರಿದ್ದ ಪಕ್ಷದಲ್ಲಿ ದಂಡ ವಿಧಿಸಬೇಕು ಅಥವಾ ಪ್ರಕರಣ ದಾಖಲಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆ ಹೊರತು ಆರಂಭದಲ್ಲಿಯೇ ಪೊಲೀಸರ ಲಾಠಿ ಮಾತನಾಡಬಾರದು’ ಎಂದು ಜೆಸಿಐ ಪ್ರಮುಖ ನ್ಯಾಯವಾದಿ ವಿಷ್ಣು ಲಾತೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇದಾಗಿದೆ. ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ಎಂದು ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನವರ ಖಂಡಿಸಿದ್ದಾರೆ.
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರಿಂದ ಹಲ್ಲೆಗೆ ಒಳಗಾದ ನಗರದ ರೆಡ್ಡಿ ಬ್ಯಾಂಕ್ ನ ಸಿಬ್ಬಂದಿ ಪೊಲೀಸರ ವಿರುದ್ದ ಉನ್ನತಾಧಿಕಾರಿಗಳಿಗೆ ದೂರು ದಾಖಲಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಪೊಲೀಸರು ಸಂಯಮ ಮೀರಿ ವರ್ತನೆ ಮಾಡುತ್ತಿರುವ ಕ್ರಮಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಾಕ್‌ಡೌನ್ ಯಶಸ್ವಿಗೊಳಿಸುವ ಹೊಣೆಗಾರಿಕೆ ಪೊಲೀಸರ ಮೇಲೆ ಇರಬಹುದು. ಲಾಕ್‌ಡೌನ್‌ಗೆ ಜನರೂ ಸಹಕಾರ ನೀಡುತ್ತಿದ್ದಾರೆ. ಆದರೆ ರಸ್ತೆಗಿಳಿಯುವುದೇ ಅಪರಾಧ ಎಂಬಂತೆ ಪೊಲೀಸರು ನಡೆಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ನೀಡಬೇಕು ಎಂಬ ಅಭಿಪ್ರಾಯಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.