ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಠಕ್ಕರ್ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಕೆಶಿ ಭೇಟಿ ನೀಡಲಿದ್ದು, ಸೋಮವಾರ ಆಗಸ್ಟ್ 24 ರಂದು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿ.ಕೆ ಶಿವಕುಮಾರ್ ಪ್ರವಾಸ ಕೈಗೊಳ್ಳಲಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದೆ. ಆದ್ರೂ ಅತೀ ಹೆಚ್ಚು ಹಾನಿಯಾದ ಪ್ರದೇಶ ಬಿಟ್ಟು ಗೋಕಾಕ್ ತಾಲೂಕಿನಲ್ಲಿ ಮಾತ್ರ ಡಿಕೆಶಿ ಪ್ರವಾಸ ಮಾಡಲಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ.
ಆಗಸ್ಟ್ 24ರಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಡಿಕೆ ಶಿವಕುಮಾರ್ ಆಗಮಿಸಲಿದ್ದು ಬೆಳಗ್ಗೆ 11.30ಕ್ಕೆ ಗೋಕಾಕ್‌ನ ನೆರೆಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅರಭಾವಿ ಕ್ಷೇತ್ರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸಂಜೆ 4 ಗಂಟೆಗೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿ ಆಗಸ್ಟ್ 25ರಂದು ಬೆಳಗಾವಿಯಿಂದ ಬಾಗಲಕೋಟೆಗೆ ಡಿಕೆಶಿ ತೆರಳಲಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಡಿಕೆಶಿ ಪ್ರವಾಸ ಹಿನ್ನೆಲೆಯಲ್ಲಿ ನೆರೆ ಪ್ರವಾಹದ ಹೆಸರಲ್ಲಿ ಮತ್ತೆ ಶುರುವಾಗುತ್ತಾ ಬಂಡೆ ಸಾಹುಕಾರ್ ಕಾಳಗ ಎನ್ನುವಂತಿದೆ.