ನವದೆಹಲಿ, -ಕೊರೊನಾ ವೈರಸ್ ಹಾವಳಿಯಿಂದ ದೇಶದ ಅನೇಕ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿ ಅಸ್ವಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಭಾರತದ ಪ್ರತಿಷ್ಠಿತ ರಿಲಾಯನ್ಸ್ ಸಂಸ್ಥೆಗೆ ನಿರಂತರವಾಗಿ ಹಣದ ಹೊಳೆ ಹರಿದುಬರುತ್ತಿದೆ.
ಅಮೆರಿಕದ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‍ನರ್ಸ್, ಹೆಸರಾಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್‍ನ ರಿಲಾಯನ್ಸ್ ರಿಟೈಲ್‍ನಲ್ಲಿ 7,500 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡಿ ಶೇ.1.75ರಷ್ಟು ಪಾಲು ಪಡೆದಿದೆ.
ಸಿಲ್ವರ್ ಲೇಕ್ ಕಂಪನಿಯು ರಿಲಾ ಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಾಯನ್ಸ್ ರಿಟೈಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್‍ವಿಎಲ್)ನಲ್ಲಿ 7,500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿದೆ ಎಂದು ಆರ್ ಆರ್‍ವಿಲ್ ಇಂದು ತಿಳಿಸಿದೆ.
ಈ ಹೂಡಿಕೆಯಿಂದ ಆರ್‍ಆರ್‍ವಿಎಲ್‍ನ ಪ್ರಿ-ಮನಿ ಈಕ್ವಿಟಿ ಮೌಲ್ಯವು 4.21 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಈ ಮೂಲಕ ಸಿಲ್ವರ್ ಲೇಕ್ ಸಂಸ್ಥೆಯ ರಿಲಾಯನ್ಸ್ ರಿಟೈಲ್‍ನಲ್ಲಿ ಶೇ.1.75ರಷ್ಟು ಪಾಲು ಪಡೆದಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಇದು ರಿಲಾಯನ್ಸ್ ಸಂಸ್ಥೆಯಲ್ಲಿ ಅಮೆರಿಕದ ಸಿಲ್ವರ್ ಲೇಕ್ ಕಂಪನಿಯ ಎರಡನೇ ಹೂಡಿಕೆಯಾಗಿದೆ. ಈ ಹಿಂದೆ ಇದೇ ಕಂಪನಿಯು ಅಂಬಾನಿ ಮಾಲೀಕತ್ವದ ಸಂಸ್ಥೆಯಲ್ಲಿ 1.35 ಶತಕೋಟಿ ಡಾಲರ್ ಬಂಡವಾಳ ಹೂಡಿತ್ತು. ಇದರೊಂದಿಗೆ ವಿಶ್ವದ ನಾಲ್ಕನೇ ಅತ್ಯಂತ ಸಿರಿವಂತ ಎಂಬ ಮುಕೇಶ್ ಅಂಬಾನಿ ಅವರ ಸ್ಥಾನ ಮತ್ತಷ್ಟು ಭದ್ರವಾಗಿದೆ.