Breaking News

ಮತದಾರರ ಪಟ್ಟಿ ಪರಿಷ್ಕರಣೆ ಲೋಪ ಸರಿಪಡಿಸಲು ಡಿಕೆಶಿ ಟೀಂ ಮನವಿ

Spread the love

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮಾಡಲಾಗುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವಂತೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನಿಯೋಗ ಮಂಗಳವಾರ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಆಯುಕ್ತರನ್ನು ಭೇಟಿಯಾದ ಮನವಿ ಸಲ್ಲಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ರಾಜ್ಯ ಚುನಾವಣಾ ಆಯೋಗವು ಜಿಬಿಎ ಅಡಿಯಲ್ಲಿನ 5 ನಗರ ಪಾಲಿಕೆಗಳು ಹಾಗೂ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಪಂ, ಗ್ರಾಪಂ ಚುನಾವಣೆ ನಡೆಸಲಿದೆ. ಅದಕ್ಕಾಗಿ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೆ, ಸದ್ಯ ಬಿಡುಗಡೆ ಮಾಡಲಾಗಿರುವ ಮತದಾರರ ಕರಡು ಪಟ್ಟಿಯಲ್ಲೂ ಕೆಲ ಲೋಪಗಳಿದ್ದು, ಅದನ್ನು ಸರಿಪಡಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಆಯೋಗ ನೇಮಕಮಾಡುವ ಬಿಎಲ್‌ಒಗಳು ಮತಪಟ್ಟಿಯಲ್ಲಿ ಅಕ್ರಮ ಎಸಗುತ್ತಿದ್ದಾರೆ. ಕಳೆದ ಬಾರಿ ಒಂದು ಕುಟುಂಬದ ಮತಗಳನ್ನು ಬೇರೆಬೇರೆ ಮತಗಟ್ಟೆಗಳಿಗೆ ಸೇರಿಸಲಾಗಿತ್ತು. ಇಲ್ಲಿ ಮ್ಯಾಪಿಂಗ್‌ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಹೀಗಾಗಿ ಬಿಎಲ್‌ಒಗಳ ಜತೆಗೆ ರಾಜಕೀಯ ಪಕ್ಷಗಳ ಬಿಎಲ್‌ಎಗಳನ್ನು ಕರೆದುಕೊಂಡು ಹೋಗಿ ಪರಿಷ್ಕರಣೆ ಮಾಡಬೇಕು. ಮತದಾರರ ಪಟ್ಟಿ ಜತೆಗೆ, ಮನೆಗಳು ಮತ್ತು ಮತಗಳ ಮ್ಯಾಪಿಂಗ್‌ ಆಗಬೇಕು. ಕಳೆದ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳು ಮತ್ತು ಮತಗಟ್ಟೆಗಳಲ್ಲಿ ಆಗಿದ್ದ ಲೋಪ ಸರಿಪಡಿಸಬೇಕು. ಈ ಹಿಂದೆ ಮತದಾರರ ಬದಲಿಗೆ ಬೇರೆಯವರು ಮತದಾರರ ಹೆಸರನ್ನು ಡಿಲೀಟ್‌ ಮಾಡಿಸಿದ ಉದಾಹರಣೆಗಳಿವೆ. ಅದನ್ನೆಲ್ಲ ಸರಿಪಡಿಸುವಂತೆ ಕೋರಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಜಿಬಿಎ, ಜಿಪಂ, ತಾಪಂ ಚುನಾವಣೆಗಳು ನಡೆಯಲಿವೆ. ಈಗಲೇ ಮತದಾರರ ಪಟ್ಟಿ ಪರಿಷ್ಕರಿಸಬೇಕು. ಒಂದು ವೇಳೆ ಲೋಪವಾದರೆ ರಾಜ್ಯ ಚುನಾವಣಾ ಆಯುಕ್ತರಿಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಆಯುಕ್ತರನ್ನು ಭೇಟಿಯಾಗಿ ಚರ್ಚೆ ಮಾಡಲಾಗಿದೆ. ಈವರೆಗೆ ಮತದಾರರ ಪಟ್ಟಿಯಲ್ಲಿ ನಾವು ನೋಡಿರುವ ಲೋಪಗಳ ಮಾಹಿತಿ ಆಯುಕ್ತರಿಗೆ ನೀಡಿದ್ದೇವೆ. ಮತಗಳನ್ನು ಬೇರೆ ಬೂತ್‌ಗಳಿಗೆ ವಿಂಗಡಿಸುವುದು, ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಅಕ್ರವಾಗಿ ತೆಗೆದಿರುವುದು, ನಕಲಿ ಮತಗಳನ್ನು ಸೇರಿಸಿರುವ ಬಿಎಲ್‌ಒಗಳನ್ನು ಅಮಾನತುಗೊಳಿಸಬೇಕು. ಕಾನೂನು ಚೌಕಟ್ಟಿನಲ್ಲಿ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.

ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಿಸಿದರೆ ಗೊಂದಲ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಅದರ ಬಗ್ಗೆ ನಾವು ಚರ್ಚಿಸುವುದಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಹಿಂದೆ ಇದ್ದ ಮತದಾರರ ಪಟ್ಟಿ ಸರಿಯಿಲ್ಲ. ಹೀಗಾಗಿ ಮತ್ತೊಮ್ಮೆ ಮ್ಯಾಪಿಂಗ್‌ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಲಿ. ಯಾರಿಗೆ ಮತದಾನ ಮಾಡುವ ಅರ್ಹತೆ ಇದೆಯೋ ಅವರಿಗೆ ಮತದಾನದ ಹಕ್ಕು ಸಿಗಲಿ ಎಂದರು.

ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್‌ ಗುಂಡೂರಾವ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಎ.ಸಿ. ಶ್ರೀನಿವಾಸ್‌, ಬಮುಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌, ವಿಧಾನಪರಿಷತ್‌ ಸದಸ್ಯರಾದ ಪುಟ್ಟಣ್ಣ, ಶ್ರೀನಿವಾಸ್‌ ಇದ್ದರು.


Spread the love

About Laxminews 24x7

Check Also

ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೀನಿ: ಕೆ.ಎನ್‌ ರಾಜಣ್ಣ

Spread the loveಬೆಂಗಳೂರು: ಮುಂದಿನ ಸಲ ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ