ಬೆಂಗಳೂರು: ಮನುಷ್ಯನ ಹುಟ್ಟು ಆಕಸ್ಮಿಕವಾದದ್ದು, ಸಾವು ಅನಿವಾರ್ಯ. ಈ ಮರಣ ಎಂಬುದು ಯಾರ ಕೈಯಲ್ಲೂ ಇಲ್ಲ. ಯಮ ನಮಗೆ ಯಾವ ಕಾರಣಕ್ಕೂ ಕರುಣೆ ತೋರಿಸಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.
ಭಾನುವಾರ ರಾತ್ರಿಯೇ ಚಿರು ಅಂತಿಮ ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಗ್ಯವಾಗಿರುವಂತಹ ಒಬ್ಬ ಯುವಕ ಇಂದು ನಮ್ಮೊಂದಿಗಿಲ್ಲ ಅನ್ನೋದು ದುಃಖದ ವಿಚಾರ. ಅನೇಕ ಸಂದರ್ಭಗಳಲ್ಲಿ, ಕಾರ್ಯಕ್ರಮಗಳಲ್ಲಿ ನಾನು ಸರ್ಜಾ ಕುಟುಂಬ ಹಾಗೂ ಚಿರಂಜೀವಿಯನ್ನು ಭೇಟಿ ಮಾಡಿದ್ದೇನೆ. ಹೀಗಾಗಿ ಅವರ ಕುಟುಂಬವನ್ನು ಕೂಡ ನಾನು ಚೆನ್ನಾಗಿ ಬಲ್ಲೆ ಎಂದರು.
ಭಗವಂತ ಕ್ರೂರವಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕರೆದುಕೊಂಡಿರುವುದು ನಿಜವಾಗಿಯೂ ಯಾರಿಗೂ ನಂಬಲು ಅಸಾಧ್ಯವಾದದ್ದು. ಈ ಘಟನೆಯನ್ನು ತಡೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇಷ್ಟು ಆರೋಗ್ಯಕರವಾಗಿದ್ದಂತಹ ಒಬ್ಬ ಯುವಕನಿಗೆ ಹೃದಯಾಘಾತವಾಗಿದೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರೂ ದುಃಖದಿಂದ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿನಿಮಾಲೋಕಕ್ಕೆ ಅಪಾರ ಸೇವೆ ಮಾಡಿದ ದೊಡ್ಡ ಕುಟುಂಬ ಸರ್ಜಾ ಅವರದ್ದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಇನ್ನೊಬ್ಬ ನಟ ಆ ಕುಟುಂಬದಲ್ಲಿ ಹುಟ್ಟಿ ಬರಲಿ ಎಂದು ಡಿಕೆಶಿ ಸಂತಾಪ ಸೂಚಿಸಿದ್ದಾರೆ.
https://youtu.be/zw1eCpO05sI