ಬೆಳಗಾವಿ: ಇಲ್ಲಿನ ಉದ್ಯಮಿಯೊಬ್ಬರನ್ನ ಡಿಜಿಟಲ್ ಅರೆಸ್ಟ್ ಮಾಡಿ 15.45 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರನ್ನ ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರಿಗೆ ಫೆಬ್ರವರಿ 7 ರಿಂದ ಮಾರ್ಚ್ 9 ರ ವರೆಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಈ ಅವಧಿಯಲ್ಲಿ, ಹಂತ ಹಂತವಾಗಿ ಬರೋಬ್ಬರಿ 15.45 ಕೋಟಿ ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಯಿಂದ ವಂಚಕರು ವರ್ಗಾಯಿಸಿಕೊಂಡಿದ್ದರು. ಈ ಕುರಿತು ಬೆಳಗಾವಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಕಮಾಂಡ್ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದರು.
ತನಿಖೆ ನಡೆಸಿದ ಪೊಲೀಸರು, ವೆಂಕದೋತ ಶರತ್ ನಾಯಕ್ ಮತ್ತು ದೇಗಾವತ ಶ್ರೀಪಾದ ನಾಯಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಎರಡು ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರಿಂದ ಹೆಚ್ಚಿನ ತನಿಖೆ ಮುಂದುವರೆದಿದೆ.
Laxmi News 24×7