ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‍ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಲ್ಲಿ ಭಾರೀ ಮಹತ್ವದ ಬೆಳವಣಿಗೆಯಾಗಿದ್ದು, ಸಿಬಿಐ ಅಧಿಕಾರಿಗಳು ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಸಹಾಯಕನಿಗೆ ಡ್ರಿಲ್ ನಡೆಸಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ್ ಕೇಕರೆಯನ್ನು ಧಾರವಾಡ ಉಪನಗರ ಠಾಣೆಗೆ ಕರೆ ತಂದಿದ್ದ ಸಿಬಿಐ ಅಧಿಕಾರಿಗಳು, ಮಧ್ಯಾಹ್ನದವರೆಗೂ ಭಾರೀ ಡ್ರಿಲ್ ನಡೆಸಿದ ಬಳಿಕ ಆತನನ್ನು ಬಿಟ್ಟಿದ್ದಾರೆ. ಶನಿವಾರದಿಂದ ಸಿಬಿಐ ತನಿಖೆ ರಾಜಕೀಯ ಆಯಾಮದ ಮೇಲೆ ನಡೆಯುತ್ತಿದ್ದು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿ ಪ್ರಮುಖ ಕೈ ನಾಯಕರಿಗೆ ಡ್ರಿಲ್ ನಡೆಸಿದ್ದರು.
ಮುಂದುವರಿದ ಭಾಗವಾಗಿಯೇ ಇಂದು ವಿನಯ್ ಕುಲಕರ್ಣಿ ಆಪ್ತ ಸಹಾಯಕನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಇಂದು ಕೂಡ ಕೆಲ ರಾಜಕೀಯ ಮುಖಂಡರು ಸಿಬಿಐ ವಿಚಾರಣೆ ಎದುರಿಸಿದ್ದಾರೆ. ಭೂ ಸ್ವಾಧೀನ ಇಲಾಖೆ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ವಿರೇಶ ಬ್ಯಾಹಟ್ಟಿಯವರನ್ನು ಸಹ ಸಿಬಿಐ ಅಧಿಕಾರಿಗಳು ಪುನಃ ವಿಚಾರಣೆಗೊಳಪಡಿಸಿದ್ದು, ಪೊಲೀಸ್ ತನಿಖೆಯ ಆರೋಪಿ ಬಸವರಾಜ ಮುತ್ತಗಿ ಭೂ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಇತ್ತೀಚೆಗೆ ಬೆಂಡೀಗೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಾಬು ಕಟಗಿಯವರನ್ನೂ ವಿಚಾರಣೆಗೆ ಒಳಪಡಿಸಿದ್ದರು.
2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು.