ಧಾರವಾಡ: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೆಂಟ್ರಲೈಜೆಷನ್ ಆಕ್ಸಿಜನ್ ವ್ಯವಸ್ಥೆ ಮಾಡಲಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.

ಧಾರವಾಡದಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೆಂಟ್ರಲೈಜೆಷನ್ ಅಕ್ಸಿಜನ್ ವ್ಯವಸ್ಥೆ ಮಾಡಲಿದ್ದೇವೆ. ಈ ಕುರಿತು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ 32 ಕೋವಿಡ್ ಲ್ಯಾಬ್ ಕೆಲಸ ಮಾಡುತ್ತಿವೆ. ಇನ್ನು ಹೆಚ್ಚು ಲ್ಯಾಬ್‍ಗಳಿಗೆ ಬೇಡಿಕೆ ಇದೆ, ಪ್ರಸ್ತುತ ದಿನಕ್ಕೆ 7ರಿಂದ 8 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಇನ್ನೊಂದು ವಾರದೊಳಗೆ ದಿನಕ್ಕೆ ಹತ್ತು ಸಾವಿರ ಟೆಸ್ಟ್ ಆಗುವಂತೆ ಮಾಡುತ್ತೇವೆ. ಅಲ್ಲದೆ ಎಲ್ಲ ಜಿಲ್ಲೆಗಳಲ್ಲಿ ಲ್ಯಾಬ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರಿನ ಹೊಂಗಸಂದ್ರದಲ್ಲಿ ಬಿಹಾರ ಮೂಲದ ವ್ಯಕ್ತಿ ಅಲೆದಾಟ ವಿಚಾರವಾಗಿ ಮಾತನಾಡಿದ ಅವರು, ಆತ ಗುರುವಾರ ಡಿಸ್ಚಾರ್ಜ್ ಆಗಿದ್ದ, ಗುಣಮುಖವಾಗಿದ್ದರಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬಿಹಾರದ ವ್ಯಕ್ತಿ ಡಿಸ್ಚಾರ್ಜ್ ಆದ ಬಳಿಕ ಜನ ಆತನನ್ನು ಸೇರಿಸಿಕೊಳ್ಳುತ್ತಿಲ್ಲ. ಹೀಗಾಗಿ ಆತ ಬೀದಿಯಲ್ಲಿ ಓಡಾಡುತ್ತಿದ್ದು, ಈಗ ಆತನಿಗೆ ಬುದ್ಧಿ ಹೇಳಿ ಹೊಟೇಲ್‍ನಲ್ಲಿ ಇಟ್ಟಿದ್ದೇವೆ. ಆತನನ್ನು ಯಾರೂ ಹೊರಗಡೆ ಬಿಟ್ಟಿದ್ದಲ್ಲ, ಅವನಷ್ಟಕ್ಕೆ ಅವನೇ ಹೋಗಿದ್ದನು. ಈಗಾಗಲೇ ಆತನ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ವರದಿ ನೆಗೆಟಿವ್ ಬಂದ ಕಾರಣ ಆತನನ್ನು ಬಿಡಲಾಗಿತ್ತು ಎಂದರು.

ಪೊಲೀಸರು, ಡಾಕ್ಟರ್ ಕುಟುಂಬ ತೊರೆದು ಕೆಲಸ ಮಾಡುತ್ತಿದ್ದಾರೆ. ಜನ ಸಹಕಾರ ಕೊಡದಿದ್ದರೆ ಏನು ಮಾಡಲು ಸಾಧ್ಯ. ಹಾಗೆಯೇ ಮಾರ್ಕೆಟ್‍ಗೆ ಹೋಗುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಜನ ಸಹಕಾರ ಕೊಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Laxmi News 24×7