ಧಾರವಾಡ: ಪೊಲೀಸರು ಮಾಡಿದ ಒಂದು ತಪ್ಪಿನಿಂದ ಧಾರವಾಡದಲ್ಲಿ ಓರ್ವ ಅಂಗವಿಕಲ ಇಂದು ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು. ಧಾರವಾಡದ ಪತ್ರೇಶ್ವರ ನಗರದಲ್ಲಿ ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (37) ಕೊಲೆಯಾದ ಅಂಗವಿಕಲ. ಕಳೆದ ಹಲವು ವರ್ಷಗಳಿಂದ ಉಮೇಶ್ ಬಾಳಗಿ ಹಾಗೂ ಸಂಬಂಧಿಕರ ನಡುವೆ ಆಸ್ತಿ ವಿವಾದ ನಡೆದಿತ್ತು. ಈ ಮೊದಲು ಉಮೇಶ್‍ನ ಮೇಲೆ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಮೊದಲೇ ಕಾಲಿಲ್ಲದೇ ಉಮೇಶ್ ತನ್ನಿಷ್ಟಕ್ಕೆ ತಾನು ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ರಕ್ತ ಸಂಬಂಧಿಗಳು ಆಸ್ತಿ ಬರೆದು ಕೊಡಲು ಪಿಡಿಸುತ್ತಲೇ ಇದ್ದರು. ಈ ಹಿಂದೆ ಉಮೇಶ್ ಹಾಗೂ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಪೊಲೀಸ್ ಆಯುಕ್ತ ಕಚೇರಿಗೆ ಕೂಡ ದೂರು ಹೋಗಿತ್ತು. ನಂತರ ಉಪನಗರ ಪೊಲೀಸರು ಉಮೇಶ್ ಅವರ ದೂರನ್ನ ಸ್ವೀಕರಿಸಿ ಪ್ರಕರಣ ದಾಖಲಿಸಿದ್ದರು.
ಆದರೆ ಆರೋಪಿಗಳನ್ನ ಬಂಧಿಸುವ ಬದಲು, ಅವರಿಂದಲೂ ಉಮೇಶ್ ವಿರುದ್ಧ ಪ್ರತಿ ದೂರನ್ನ ಪಡೆದಿದ್ದರು. ಆಗಲೇ ಆರೋಪಿಗಳನ್ನ ಬಂಧಿಸಿದ್ದರೆ ಈಗ ಉಮೇಶ್ ಅವರ ಕೊಲೆ ನಡೆಯುತ್ತಿರಲಿಲ್ಲ. ಇವತ್ತು ಉಮೇಶ್ ಮನೆ ಬಳಿ ರಸ್ತೆಯಲ್ಲಿ ಬರುವಾಗಲೇ ಅವರ ಮೇಲೆ ಕಲ್ಲು ಹಾಗೂ ಕಬ್ಬಿಣದ ರಾಡ್‍ನಿಂದ ಸಂಬಂಧಿಕರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಪನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೈದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಪೊಲೀಸರ ಒಂದು ಸಣ್ಣ ತಪ್ಪಿನಿಂದ ಅಮಾಯಕ ಅಂಗವಿಕಲನ ಕೊಲೆ ನಡೆದು ಹೋಯಿತು ಎಂಬ ಆರೋಪ ಕೇಳಿ ಬಂದಿದೆ. ಇತ್ತ ಉಮೇಶ್ ಅವರನ್ನು ಕಳೆದುಕೊಂಡ ಪತ್ನಿ ಹಾಗೂ ಮಗಳು ಮೃತದೇಹದ ಮುಂದೆ ಕಣ್ಣೀರಿಡುತ್ತಾ ನಿಂತಿದ್ದರು.