Breaking News

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the love

ಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ ಆಸ್ತಿ ಸಂಖ್ಯೆ (ಪಿಐಡಿ) ನೀಡಿ ಅಕ್ರಮ ಎಸಗಿರುವ ಮೂವರು ಅಧಿಕಾರಿ, ಕಟ್ಟಡ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದಲ್ಲಿ ಅನಧಿಕೃತ ಆಸ್ತಿಗಳಿಗೆ ಅಕ್ರಮವಾಗಿ ಪಿಐಡಿ ನೀಡುವ ಕೃತ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕೂಡಲೇ ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು. ಆ ಕಟ್ಟಡದ ಮಾಲೀಕರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರವೇಶಿಸಿದ ಉಪ ಆಯುಕ್ತ (ಕಂದಾಯ) ಸಿದ್ದು ಹುಲ್ಲೋಳ್ಳಿ ಮಾತನಾಡಿ, ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿ ಒಟ್ಟು 31 ಆಸ್ತಿಗಳಿಗೆ ನಕಲಿ ದಾಖಲಾತಿ ಆಧಾರದ ಮೇಲೆ ಪಿಐಡಿ ನೀಡಿ ಅಕ್ರಮ ಎಸಗಿರುವ ಮೂವರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದಿರುವ 8.5 ಕೋಟಿ ರೂ. ವಸೂಲಿಗೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಆ್ಯಪ್ ಮೂಲಕ ತೆರಿಗೆ ತುಂಬಲು ಅವಕಾಶ ಕಲ್ಪಿಸಲಾಗುತ್ತಿದೆ. ಶೇ.5ರಷ್ಟು ತೆರಿಗೆ ವಿನಾಯಿತಿ ಮುಂದುವರಿಸಲು ಕ್ರಮ ವಹಿಸಲಾಗುತ್ತಿದೆ. ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ, ಆಸ್ತಿ ಮಾಲೀಕರಿಗೆ ಮೂಲ ಸೌಕರ್ಯ ಸ್ಥಗಿತಗೊಳಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಮೇಯರ್ ಮಂಗೇಶ ಪವಾರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗೂ ಗೃಹ ಬಳಕೆ ತೆರಿಗೆ ಕುರಿತು ಸರ್ವೇ ನಡೆಸಿದರೆ ಪಾಲಿಕೆ ಆದಾಯ ಹೆಚ್ಚಾಗುತ್ತದೆ. ಅಲ್ಲದೆ, 30 ವರ್ಷಗಳಿಂದ ಬೇರೆಯಾಗಿರುವ ಸಹೋದರರು ಪಾಲಿಕೆಗೆ ತೆರಿಗೆ ತುಂಬದೆ ವಂಚನೆ ಮಾಡುತ್ತಿದ್ದಾರೆ. ಅವುಗಳನ್ನು ಪತ್ತೆ ಮಾಡಬೇಕು ಎಂದರು.
ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಒಂದು ಅಂತಸ್ತಿನ ಮನೆ ತೆರಿಗೆ ತುಂಬಿ ನಾಲ್ಕೈದು ಅಂತಸ್ತಿನ ಮನೆಗಳನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂಥವುಗಳನ್ನು ಸರ್ವೇ ಮಾಡುವ ಅಗತ್ಯ ಇದೆ. ಪಾಲಿಕೆಯ ಆದಾಯ ಹೆಚ್ಚಿಸಿ ಬೆಳಗಾವಿ ನಗರದ ಅಭಿವೃದ್ಧಿಗೆ ಪೂರಕ ಕೆಲಸ ಮಾಡಬೇಕು. ತೆರಿಗೆಯಲ್ಲಿ ವಂಚನೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಮೇಯರ್ ಪ್ರೀತಿ ಕಾಮಕರ, ಸದಸ್ಯರಾದ ರವಿ ದೋತ್ರೆ, ದಿನೇಶ ನಾಶಿಪುಡಿ, ಆಯುಕ್ತ ಕಾರ್ತಿಕ ಎಂ. ಇತರರಿದ್ದರು.

Spread the love

About Laxminews 24x7

Check Also

 ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಮೂರು ವರ್ಷ ಜೈಲು ಶಿಕ್ಷೆ

Spread the loveಬೆಳಗಾವಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಗಣೇಶಪುರ ಲಕ್ಷ್ಮೀ ನಗರದ ಸಚಿನ ಕಾಕತ್ಕರ್ (30)ಗೆ ಇಲ್ಲಿನ ಪೋಕ್ಸೋ ನ್ಯಾಯಾಲಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ