ನವದೆಹಲಿ: ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಎಂ.ಎಸ್ ಧೋನಿ ಅವರ ನಿವೃತ್ತಿಯ ಬಗ್ಗೆ ಮಾತನಾಡಿರುವರ ವಿರುದ್ಧ ಪತ್ನಿ ಸಾಕ್ಷಿ ಧೋನಿ ಕಿಡಿಕಾರಿದ್ದಾರೆ.
ಇತ್ತೀಚೆಗೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಧೋನಿ ಅವರು ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಬಿಟ್ಟರೇ ಧೋನಿ ಮತ್ತೆ ಯಾವ ಪಂದ್ಯವನ್ನು ಆಡಿಲ್ಲ. ಈ ಕಾರಣಕ್ಕೆ ಅವರ ವಿದಾಯದ ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದೆ.
ಧೋನಿ ಅವರ ನಿವೃತ್ತಿ ವಿಚಾರ ಮುನ್ನೆಲೆಯಲ್ಲಿ ಇದ್ದಾಗಲೇ ಬುಧವಾರ ಸಂಜೆ ಟ್ವಿಟ್ಟರ್‍ನಲ್ಲಿ ಧೋನಿ ನಿವೃತ್ತಿ ಬಗ್ಗೆ #DhoniRetires ಎಂಬ ಹ್ಯಾಸ್‍ಟ್ಯಾಗ್ ಬಳಸಿ ಟ್ರೆಂಡ್ ಹುಟ್ಟುಹಾಕಲಾಗಿತ್ತು. ಇದನ್ನು ಕಂಡು ಕೋಪಗೊಂಡ ಸಾಕ್ಷಿ, ಇದೊಂದು ಸಳ್ಳು ಸುದ್ದಿ. ಈ ಲಾಕ್‍ಡೌನ್ ಸಮಯದಲ್ಲಿ ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಂತರ ಈ ಟ್ವೀಟ್ ಡಿಲೀಟ್ ಕೂಡ ಮಾಡಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿದಿರುವ ಧೋನಿ, ಮಗಳು ಹಾಗೂ ಪತ್ನಿಯ ಜೊತೆ ತಮ್ಮ ತೋಟದ ಮನೆಯಲ್ಲಿ ಕಾಲಕಾಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೊಸ ಲುಕ್‍ನಲ್ಲಿ ಫಾರ್ಮ್ ಹೌಸ್ ನಲ್ಲಿ ಕಾಣಿಸಿಕೊಂಡ ಫೋಟೋಗಳು ಸಖತ್ ವೈರಲ್ ಆಗಿದ್ದವು. ಜೊತೆಗೆ ವಿಡಿಯೋದಲ್ಲಿ ಪುಟ್ಟ ಮಗಳು ಜೀವಾ ಜೊತೆ ಆಟವಾಡುತ್ತಿರುವುದು ಕಂಡುಬಂದಿತ್ತು.
ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ನಂತರ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇದಾದ ನಂತರ ಭಾರತೀಯ ಸೇನೆಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ ಧೋನಿ. ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದಕ್ಕಾಗಿ ಚೆನ್ನೈಗೆ ಬಂದು ಅಭ್ಯಾಸ ಕೂಡ ಮಾಡಿದ್ದರು. ಆದರೆ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಮುಂದಕ್ಕೆ ಹೋಗಿದೆ.
ಈ ನಡುವೆ ಧೋನಿ ಮತ್ತೆ ಕ್ರಿಕೆಟ್‍ಗೆ ಮರಳುತ್ತಾರ ಇಲ್ಲ ವಿದಾಯ ಘೋಷಿಸುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ. ಈ ವಿಚಾರವಾಗಿ ಮಾತನಾಡಿದ್ದ ವಿರೇಂದ್ರ ಸೆಹ್ವಾಗ್, ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದರು ಜೊತೆಗೆ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಧೋನಿ ಮತ್ತೆ ಟೀಂ ಇಂಡಿಯಾದ ಮರಳುವುದು ಅನುಮಾನ ಎಂದು ಹೇಳಿದ್ದರು