ಚಿತ್ರದುರ್ಗ: ಕೋವಿಡ್-19 ಸೋಂಕಿನಿಂದ ಜನರನ್ನು ಸಂರಕ್ಷಿಸಲು ಅರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆರು ಹಗಲು ಇರುಳು ಎನ್ನದೇ ಶ್ರಮಿಸುತಿದ್ದಾರೆ.
ಆಂಧ್ರದಿಂದ ಬಂದಿದ್ದ ಬೈಕ್ ಸವಾರರನ್ನು ತಡೆದು ಪರಿಶೀಲನೆ ನಡೆಸಿದ ಪರಿಣಾಮ ಕರ್ತವ್ಯನಿರತ ಕೊರೊನಾ ವಾರಿಯರ್ಸ್ ಎನಿಸಿರುವ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಚೆಕ್ ಪೋಸ್ಟ್ ಬಳಿ ಪರಶುರಾಂಪುರ ಠಾಣೆಯ ಕರ್ತವ್ಯ ನಿರತ ಪೊಲೀಸ್ ಪೇದೆ ಶಿವಣ್ಣ ಅವರು ಆಂಧ್ರಪ್ರದೇಶ ರಾಜ್ಯದ ಶೆಟ್ಟೂರು ಗ್ರಾಮದಿಂದ ಬೈಕ್‍ನಲ್ಲಿ ಬಂದಿದ್ದ ಮೂವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಮಂಜು ಎಂಬ ಕಿಡಿಗೇಡಿಯು ಕುಡಿದ ಅಮಲಿನಲ್ಲಿ ಪೇದೆ ಶಿವಣ್ಣ ಅವರ ಹಲ್ಲೆ ನಡೆಸಿದ್ದಾನೆ.
ಅಲ್ಲದೇ ಅಸಭ್ಯ ವರ್ತನೆ ತೋರಿಸುತ್ತಾ, ಅವಾಚ್ಯ ಶಬ್ದಗಳನ್ನು ನಿಂದಿಸಿದ್ದಾರೆ. ಬೈಕಿನಲ್ಲಿ ಬರುತ್ತಿದ್ದವರನ್ನು ಕಂಡು ಸ್ಥಳೀಯರು ಸಹ ಬುದ್ಧಿ ಹೇಳಿದ್ದಕ್ಕೆ ಸಾರ್ವಜನಿಕರ ಮೇಲೆಯೂ ಈ ಕಿಡಿಗೇಡಿಗಳು ಹಲ್ಲೆಗೆ ಮುಂದಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಗೆಯೇ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳ ಹಲ್ಲೆಯ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.