ಬೆಳಗಾವಿ: ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಕಸದಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಸಿಕ್ಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ನಡೆದಿದೆ.
ಪುರಸಭೆ ವಾಹನಗಳ ಮೂಲಕ ಪೌರಕಾರ್ಮಿಕರು ಕಸ ಸಂಗ್ರಹ ಮಾಡುತ್ತಿದ್ದಾಗ ಕಸದಲ್ಲಿ ಮಾಂಗಲ್ಯ ಸರ ಸಿಕ್ಕಿದ್ದು, ಸಂಬಂಧಪಟ್ಟ ಮಾಲೀಕರಿಗೆ ಬಂಗಾರದ ಸರ ಮರಳಿಸುವ ಮೂಲಕ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಎಂದಿನಂತೆ ಇಂದು ಮುಂಜಾನೆ ಎಂ.ಜಿ.ಮಾರ್ಕೆಟ್ ನಲ್ಲಿ ಕಸ ಸಂಗ್ರಹಿಸಿದ ಪೌರ ಕಾರ್ಮಿಕ ಮಾರುತಿ ಭಜಂತ್ರಿ ಹಾಗೂ ವಾಹನ ಚಾಲಕ ಬಸವರಾಜ ಕೋರಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿದ್ದ ಕಸ ವಿಲೇವಾರಿ ಮಾಡುತ್ತಿದ್ದರು. ಈ ವೇಳೆ ಚಿನ್ನದ ಮಾಂಗಲ್ಯ ಸರ ಸಿಕ್ಕಿದೆ.
ಚಿನ್ನದ ಅಂಗಡಿಯ ಮಾಲೀಕರೊಬ್ಬರು ಕಾಗದದಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಮಾಂಗಲ್ಯ ಸರವೊಂದು ಕಸದ ಡಬ್ಬಿಯಲ್ಲಿ ಹೋಗಿರುವ ಸಾಧ್ಯತೆ ಇದೆ. ಹುಡುಕಿಕೊಡಿ ಎಂದು ಪೌರ ಕಾರ್ಮಿಕರಿಗೆ ಹೇಳಿದ್ದರು. ಎರಡನೇ ಬಾರಿ ಕಸ ವಿಲೇವಾರಿಗೆ ಹೋಗಿದ್ದಾಗ ಕಸದಲ್ಲಿ ಹುಡುಕಿದಾಗ ಚಿನ್ನದ ಸರ ಸಿಕ್ಕಿದೆ. ತಕ್ಷಣ ಅದನ್ನು ಅಂಗಡಿ ಮಾಲೀಕರಿಗೆ ತಂದುಕೊಟ್ಟು ಮಾರುತಿ ಹಾಗೂ ಬಸವರಾಜ ಇಬ್ಬರೂ ಪ್ರಾಮಾಣಿಕತೆ ಮೆರೆದಿದ್ದಾರೆ. ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.