ಉಡುಪಿ: ಕಿಲ್ಲರ್ ಕೊರೊನಾ ವೈರಸ್ ಇಡೀ ವಿಶ್ವವನ್ನು ನಲುಗಿಸಿಬಿಟ್ಟಿದೆ. ಮದ್ದೇ ಇಲ್ಲದ ಕೊರೊನಾ ವೈರಸ್ಸಿಗೆ ದೇಶದ ಜನ ಹೈರಾಣಾಗಿ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕೊರೊನಾ ವೈರಸ್ ಒಂದು ಕಡೆಯಿಂದ ಕಿರುಕುಳ ಕೊಡುತ್ತಿದ್ದರೆ, ಉಡುಪಿ ಜಿಲ್ಲೆಯಲ್ಲಿ ಫೇಕ್ ಆಫೀಸರ್ಸ್ ಹುಟ್ಟಿಕೊಂಡಿದ್ದಾರೆ.
ನಾವು ಕೊರೊನಾ ವೈರಸ್ ಪತ್ತೆ ಮಾಡುವವರು ಮತ್ತು ಅಂಕಿ ಅಂಶವನ್ನು ಸಂಗ್ರಹ ಮಾಡುವವರು ಎಂದು ಉಡುಪಿ ನಗರದ ಕೆಲ ವಾರ್ಡ್ ಗಳ ಮನೆಗಳಿಗೆ ನಕಲಿ ಆಫೀಸರ್ ಗಳು ಹೋಗುತ್ತಿದ್ದಾರೆ. ಮನೆಗಳಿಗೆ ಬಂದು ನಾವು ಆರೋಗ್ಯ ಇಲಾಖೆಯಿಂದ ನೇಮಿಸಲ್ಪಟ್ಟ ಸಿಬ್ಬಂದಿ ಎಂದು ಸುಳ್ಳು ಹೇಳಿ ಜನರಿಂದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.
ಉಡುಪಿ ಡಿಹೆಚ್‍ಒ ಡಾಕ್ಟರ್ ಸುಧೀರ್ ಚಂದ್ರ ಸೂರಿಗೂ ಈ ಬಗ್ಗೆ ದೂರುಗಳು ಬಂದಿದೆ. ಕೊರೊನಾ ತಪಾಸಣೆಯ ಹೆಸರಲ್ಲಿ ಅಪರಿಚಿತರಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಅಪರಿಚಿತರು ಮನೆಗೆ ಬಂದ್ರೆ ಮಾಹಿತಿ ಕೊಡಬೇಡಿ. ಉಡುಪಿಯ ಬನ್ನಂಜೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು ಅಂತ ಯಾರೋ ಬಂದಿದ್ರು. ಆರೋಗ್ಯ ಇಲಾಖೆಯ ಐಡಿ, ಧೃಡೀಕರಣ ಪತ್ರ ಇದ್ದರೆ ಮಾತ್ರ ಮಾಹಿತಿ ಕೊಡಿ ಎಂದರು.
ನಮ್ಮ ಸಿಬ್ಬಂದಿ ಯೂನಿಫಾರ್ಮ್ ನಲ್ಲಿ ಇರುತ್ತಾರೆ. ಅಪರಿಚಿತರಿಗೆ ಯಾವ ಮಾಹಿತಿ ಕೊಡುವ ಅಗತ್ಯ ಇಲ್ಲ ಎಂದು ಡಿ.ಎಚ್.ಒ ಮಾಹಿತಿ ನೀಡಿದ್ದಾರೆ. ಅಂಗನವಾಡಿ ಆಶಾ ಕಾರ್ಯಕರ್ತರು ಮತ್ತು ಗುತ್ತಿಗೆ ಆಧಾರದಲ್ಲಿ ನೇಮಿಸಲ್ಪಟ್ಟ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಸಿಬ್ಬಂದಿ ಕೊರೊನಾ ವೈರಸ್ ಬಗ್ಗೆ ಜನಜಾಗೃತಿಯನ್ನು ಮಾಡಿಸ್ತಾ ಇದ್ದೇವೆ ಎಂದರು.
ಕಷ್ಟದ ಸಂದರ್ಭವನ್ನು ಉಪಯೋಗಿಸಿಕೊಂಡು ಯಾರೋ ಕಿಡಿಗೇಡಿಗಳು ಆರೋಗ್ಯ ಅಧಿಕಾರಿಗಳೆಂದು ಹೇಳಿಕೊಂಡು ಮನೆಗಳಿಗೆ ತೆರಳುತ್ತಿರುವುದು ತಪ್ಪು. ಐಡಿ ಇಲ್ಲದ, ಯೂನಿಫಾರ್ಮ್ ಗಳು ಇಲ್ಲದ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಅಥವಾ ಆರೋಗ್ಯ ಇಲಾಖೆಗೆ ದೂರು ನೀಡಿ ಎಂದು ಡಿಎಚ್‍ಒ ಮನವಿ ಮಾಡಿದ್ದಾರೆ.