ಬೆಂಗಳೂರು: ಕಾಂಗ್ರೆಸ್ಗೆ ಯಾರೂ ಒತ್ತಡ ಹೇರಲು ಆಗುವುದಿಲ್ಲ. ಬ್ಲ್ಯಾಕ್ಮೇಲ್ ಮಾಡಲಿಕ್ಕೂ ಆಗುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಕುಟುಂಬವೂ ಕೇಳುತ್ತಿದೆ.
ಹಾಗೆಯೇ ಅಲ್ಪಸಂಖ್ಯಾತ ಸಮುದಾಯವೂ ಬೇಡಿಕೆ ಇಟ್ಟಿದೆ. ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಅದು ತಪ್ಪೇನಲ್ಲ. ಆದರೆ, ಯಾರೂ ಒತ್ತಡ ಹಾಕಲು ಬರುವುದಿಲ್ಲ. ಬ್ಲ್ಯಾಕ್ಮೇಲ್ ಮಾಡಲಿಕ್ಕೂ ಆಗದು ಎಂದು ಹೇಳಿದರು.
ಈಗಾಗಲೇ ನಾಮಪತ್ರ ಕೂಡ ಸಲ್ಲಿಸಿದ್ದಾರಲ್ಲ ಎಂದು ಕೇಳಿದಾಗ, ಯಾರೋ ಮುಹೂರ್ತ ಹೇಳಿರುತ್ತಾರೆ. ಅದಕ್ಕಾಗಿ ನಾಮಪತ್ರ ಸಲ್ಲಿಸಿರುತ್ತಾರೆ. ಅದು ಸಹಜ ಕೂಡ. ನಾವೂ ಕೆಲವು ಸಲ ಹಾಗೆ ಸಲ್ಲಿಸಿದ್ದುಂಟು. ಅದೆಲ್ಲವೂ ಇದ್ದೇ ಇರುತ್ತದೆ ಎಂದು ಸಮಜಾಯಿಷಿ ನೀಡಿದರು.
ದಾವಣಗೆರೆ ಟಿಕೆಟ್ ಗೊಂದಲ ವಿಚಾರದ ಬಗ್ಗೆ ಕೇಳಿದಾಗ, ಶಾಮನೂರು ಕುಟುಂಬ ಟಿಕೆಟ್ ಕೇಳುತ್ತಿದೆ. ಬಾಗಲಕೋಟೆಯಲ್ಲಿ ಎಚ್.ವೈ. ಮೇಟಿ ಕುಟುಂಬಕ್ಕೆ ಟಿಕೆಟ್ ಕೊಡುತ್ತಿಲ್ಲವೇ? ಹಾಗೆಯೇ ಇಲ್ಲಿಯೂ ತಮ್ಮ ಕುಟುಂಬಕ್ಕೆ ಕೊಡಬೇಕು ಎಂದು ಹೇಳುತ್ತಿದೆ. ಅತ್ತ ಅಲ್ಪಸಂಖ್ಯಾತ ಸಮುದಾಯವೂ ಬೇಡಿಕೆ ಇಟ್ಟಿದೆ. ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಅದರಲ್ಲಿ ತಪ್ಪೇನಿಲ್ಲ. ಆದರೆ, ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿದೆ ಎಂದರು.
ಪಂಚರಾಜ್ಯ ಚುನಾವಣೆ ಬಳಿಕ ಪ್ರಧಾನಿ ಭೇಟಿ:
ಬೇರೆ ಬೇರೆ ರಾಜ್ಯಗಳ ಚುನಾವಣೆಗಳು ನಡೆಯುತ್ತಿವೆ. ಈ ಹಂತದಲ್ಲಿ ಸಭೆ ನಡೆಸಿ, ಸರ್ವಪಕ್ಷ ನಿಯೋಗ ಪ್ರಧಾನಿ ಭೇಟಿ ಮಾಡುವುದರಿಂದ ಮುಜುಗರ ಆಗಬಹುದು ಎಂದು ಬೇರೆ ದಿನಾಂಕ ನಿಗದಿ ಮಾಡಲು ಕೇಳಿದರು. ಚುನಾವಣೆ ಮುಗಿದ ಬಳಿಕ ಮತ್ತೆ ದಿನಾಂಕ ನಿಗದಿ ಆಗಲಿದೆ. ಆಗ ರಾಜ್ಯದ ಸಂಸದರ ಜತೆ ಚರ್ಚಿಸುತ್ತೇವೆ ಎಂದು ಕೈಗಾರಿಕಾ ಸಚಿವ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಈಚೆಗೆ ದೆಹಲಿಯಲ್ಲಿ ಏರ್ಪಡಿಸಲಾಗಿದ್ದ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಸಂಸದರ ಸಭೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿ, ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ 173 ಟಿಎಂಸಿ ನೀರು ನಮಗೆ ಸಿಕ್ಕಿದೆ. ಅದಕ್ಕಾಗಿ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಬೇಕು. 10 ವರ್ಷವಾದರೂ ಅಧಿಸೂಚನೆ ಆಗಿರಲಿಲ್ಲ. ಈ ಯೋಜನೆಗಾಗಿ ಅಗತ್ಯ ಭೂ ಸ್ವಾಧೀನಕ್ಕೆ ಯಾವುದೇ ಅಡೆತಡೆ ಇಲ್ಲ. ನಮ್ಮ ಸ್ವಂತ ‘ರಿಸ್ಕ್’ ಮೇಲೆ ಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ. ನೆರೆಯ ಆಂಧ್ರಪ್ರದೇಶ ತಕರಾರು ಸಲ್ಲಿಸಿದರೂ, ಅದು ಗಣನೆಗೆ ಬರುವುದಿಲ್ಲ ಎಂದು ಹೇಳಿದರು.
Laxmi News 24×7