Breaking News

ಕಾಫಿನಾಡಿಗರೇ ಹುಷಾರ್! ಅಸಲಿ ನೋಟುಗಳನ್ನು ಮೀರಿಸಿ ಚಲಾವಣೆಗೆ ಬಂದಿವೆ ಖೋಟಾ ನೋಟುಗಳು..

Spread the love

ಚಿಕ್ಕಮಗಳೂರು : ಅಂಗಡಿಗೆ ಹೋಗಿ ಚೇಂಜ್ ಇಸ್ಕೊಬೇಕಾದ್ರೆ ಹುಷಾರ್! ಲಕ್ಷಾಂತರ ರೂ ವ್ಯವಹಾರ ಮಾಡ್ಬೇಕಾದ್ರೂ ಜೋಪಾನ! ಅದ್ರಲ್ಲೂ 500-2000 ರೂಪಾಯಿಗಳ ನೋಟ್ ತೆಗೆದುಕೊಳ್ಳಬೇಕಾದ್ರೆ ಬಿ ಕೇರ್ ಫುಲ್! ಅಷ್ಟಕ್ಕೂ ನಾವ್ ನಿಮ್ನ ಸುಮ್ನೇ ಹೆದರಿಸ್ತಿಲ್ಲ, ಹಣದ ವ್ಯವಹಾರ ಮಾಡ್ಬೇಕಾದ್ರೆ ಮೋಸ ಹೋಗ್ಬೇಡಿ ಅಂತಾ ಎಚ್ಚರಿಸ್ತಾ ಇದ್ದೀವಿ. ಏಕೆಂದರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಆ ಎರಡು ಪ್ರಕರಣಗಳು ನೀವು ಹುಷಾರಾಗಿರೋದು ಒಳಿತು ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ.

ಪ್ರಕರಣ 1:
ನೂರಲ್ಲ, ಇನ್ನೂರಲ್ಲ, ಬರೋಬ್ಬರಿ 500ರೂ ಮುಖಬೆಲೆಯ 5,50,000 ರೂಪಾಯಿ ನಕಲಿ ನೋಟನ್ನ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ರು ರೆಡ್ ಹ್ಯಾಂಡಾಗಿ ಮೂಡಿಗೆರೆ ಸಮೀಪದ ಹಾಂದಿ ಬಳಿ ವಶಪಡಿಸಿಕೊಂಡಿದ್ದಾರೆ. ಯಾವುದೇ ವ್ಯತ್ಯಾಸವಿಲ್ಲದಂತೆ ಕಾಣೋ ಈ ನಕಲಿ ನೋಟುಗಳು, ಅಸಲಿ ನೋಟುಗಳನ್ನ ಕೂಡ ಮೀರಿಸ್ತಾವೆ. ಅಷ್ಟು ಪರ್ಫೆಕ್ಟಾಗಿ ಮುದ್ರಣವಾಗಿರುವ ಈ ಖೋಟಾ ನೋಟುಗಳನ್ನು ಖದೀಮರ ಗುಂಪೊಂದು ಚಲಾವಣೆ ಮಾಡುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ತಿಳಿದುಕೊಂಡು ಆಲ್ದೂರು ಪೊಲೀಸ್ ಇನ್ಸ್ಪೆಕ್ಟರ್ ಶಂಭುಲಿಂಗಯ್ಯ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ ಖೋಟಾ ನೋಟು ಸಾಗಿಸುತ್ತಿದ್ದ ಕಾರಿನ ಸಮೇತ ಆರೋಪಿಗಳನ್ನ ಬಂಧಿಸಿದ್ದಾರೆ.

ಖದೀಮರು ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರಿಗೆ ನಕಲಿ ಹಣವನ್ನ ಸಾಗಿಸುತ್ತಿದ್ದಾಗ ಅರೆಸ್ಟ್ ಆಗಿದ್ದಾರೆ. ಇದ್ರಲ್ಲಿ ಇನ್ನೊಂದು ಇಂಟರೆಸ್ಟಿಂಗ್ ಮ್ಯಾಟ್ರು ಅಂದ್ರೆ, ಈ ಖದೀಮರು ಹೋಗ್ತಾ ಇದ್ದಿದ್ದು ರೆಡ್ ಮರ್ಕ್ಯೂರಿಯನ್ನ ಖರೀದಿ ಮಾಡೋದಕ್ಕಂತೆ. ರೆಡ್ ಮರ್ಕ್ಯೂರಿ ಅಸಲಿಯತ್ತು ಏನು ಅನ್ನೋದನ್ನ ಒಂದೆಡೆ ತನಿಖೆ ಮಾಡ್ತಿರೋ ಪೊಲೀಸ್ರು, ಸದ್ಯ ಖೋಟಾ ಖದೀಮರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಂತೋಷ್ ಹಾಗೂ ನಾಸೀರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
  

ಪ್ರಕರಣ 2:
ನಕಲಿ 500 ರೂಪಾಯಿಯ ಸ್ಟೋರಿ ಒಂದ್ಕಡೆಯಾದ್ರೆ ಮತ್ತೊಂದೆಡೆ ಮೂಡಿಗೆರೆಯಲ್ಲಿ ಕೊರೊನಾದಿಂದ ಬ್ಯುಸಿನೆಸ್ ಕೈಕೊಟ್ಟ ಹಿನ್ನೆಲೆಯಲ್ಲಿ ಕಾಳುಮೆಣಸು, ಏಲಕ್ಕಿ, ಕಾಫಿ ವ್ಯಾಪಾರವನ್ನ ತಂದೆಯ ಜೊತೆ ಸೇರಿ ಮಾಡ್ತಿದ್ದ 32 ವರ್ಷದ ಪ್ರಮೋದ್ ಹಾಗೂ ತರಕಾರಿ ವ್ಯಾಪಾರ ಮಾಡ್ತಿದ್ದ 23 ವರ್ಷದ ಶಕೀಲ್ ಹೊಸ ವ್ಯವಹಾರಕ್ಕೆ ಇಳಿದಿದ್ರು. ಇವರು ಕಲರ್ ಪ್ರಿಂಟರ್​ನಿಂದ ಗರಿ ಗರಿ ಕಲರ್ ನೋಟುಗಳನ್ನ ಪ್ರಿಂಟ್ ಮಾಡಿ, ಆ ಹಣವನ್ನ ಚಲಾವಣೆ ಮಾಡಿ ಲಾಭ ಮಾಡಲು ಸಜ್ಜಾಗಿದ್ರು.

ಇವರು ಹೆಚ್ಚಾಗಿ 2000ರೂಪಾಯಿಯ ನೋಟನ್ನೇ ಹೆಚ್ಚಾಗಿ ಮುದ್ರಿಸುತ್ತಿದ್ರು. ಸದ್ಯ ನೋಟನ್ನ ಕಲರ್ ಪ್ರಿಂಟ್ ಮಾಡಿ ಜನರನ್ನ ಯಾಮಾರಿಸೋಕೆ ಹೋಗಿ ಇದೀಗ ಈ ಇಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. ಗೋಡನ್ ವೊಂದರಲ್ಲಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಮೆಷಿನ್ ಸೇರಿದಂತೆ ನಕಲಿ 2000 ರೂ ಮುಖಬೆಲೆಯ 350 ನೋಟುಗಳನ್ನು ಮೂಡಿಗೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ತಮ್ಮ ಇಲಾಖೆಯ ಪೊಲೀಸರ ಕಾರ್ಯಕ್ಕೆ ಎಸ್ಪಿ ಅಕ್ಷಯ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ‌.

ಒಂದ್ಕಡೆ ರೆಡ್ ಮರ್ಕ್ಯೂರಿಯ ಹಿಂದೆ ಬಿದ್ದು ಇಬ್ಬರು ಆರೋಪಿಗಳು ಲಾಕ್ ಆಗಿದ್ರೆ, ಮತ್ತೊಂದೆಡೆ ಕೊರೊನಾದಿಂದ ಲಾಸ್ ಆಗಿದೆ, ಲಾಭ ಮಾಡ್ಕೊಬೇಕು ಅನ್ನೋ ಆಸೆಗೆ ಬಿದ್ದು ಮತ್ತಿಬ್ಬರು ಯುವಕರು ಅರೆಸ್ಟ್ ಆಗಿದ್ದಾರೆ. ಅಷ್ಟಕ್ಕೂ ಈಗಷ್ಟೇ ಇವರ ನಕಲಿಯಾಟ ಬೆಳಕಿಗೆ ಬಂದಿದೆ. ಇದಕ್ಕಿಂತ ಮೊದ್ಲು ಈ ರೀತಿಯ ನಕಲಿ ಗ್ಯಾಂಗ್​ಗಳು ಅದೆಷ್ಟು ಜನರಿಗೆ ಯಾಮಾರಿಸಿದ್ದಾವೂ ದೇವ್ರೇ ಬಲ್ಲ. ಯಾವ್ದಕ್ಕೂ ನೀವು ವ್ಯವಹಾರ ಮಾಡೋ ಮುನ್ನ ಎಚ್ಚರದಿಂದ ಇರ್ಲೇಬೇಕು, ಇಲ್ಲ ಅಂದ್ರೆ ಇಂತಹ ನಕಲಿಗಳು ನಿಮ್ಗೆ ಮಕ್ಮಲ್ ಟೋಪಿ ಹಾಕೋದ್ರಲ್ಲಿ ಡೌಟೇ ಇಲ್ಲ.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ