Breaking News

ಬೇರೆಯವರ ಹೆಂಡತಿ ಬಗ್ಗೆ ಮಾತನಾಡುವಾಗ ಎಲ್ಲರೂ ಹುಷಾರಾಗಿಬೇಕು

Spread the love

ಬೇರೆಯವರ ಹೆಂಡತಿ ಬಗ್ಗೆ ಮಾತನಾಡುವಾಗ ಎಲ್ಲರೂ ಹುಷಾರಾಗಿಬೇಕು ಎನ್ನುವುದಕ್ಕೆ ನಿದರ್ಶನವಾಗಿ ಚಿಕ್ಕೋಡಿಯಲ್ಲೊಂದು ಘಟನೆ ನಡೆದಿದೆ. ಆತ್ಮೀಯ ಸ್ನೇಹಿತರ ನಡುವೆ ಹೆಂಡತಿ ವಿಚಾರ ಬಂದು ಅದು ಕೊಲೆಯಲ್ಲಿ ಅಂತ್ಯಗೊಂಡಿದೆ. ಆಗಿದ್ದೇನೆಂದರೆ, ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗೆಳೆಯನನ್ನು ವ್ಯಕ್ತಿಯೊಬ್ಬ ಹೆಂಡ ಕುಡಿಸಿ ಕೊಲೆ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಸುನೀಲ್ ಸಾಳುಂಕೆ(೩೪) ಕೊಲೆಯಾದವನು. ಮಹಾಂತೇಶ ಮತ್ತು ರಾಜು ಎಂಬವರನ್ನು ಈ ಕೊಲೆಗೆ ಸಂಬಂಧಿಸಿ ಬಂಧಿಸಲಾಗಿದೆ. ಅಕ್ಟೋಬರ್‌ ೭ರಂದು ಈ ಕೊಲೆ ನಡೆದಿತ್ತು.

 

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಸುನಿಲ್‌ ಸಾಳುಂಕೆ ಮತ್ತು ಮಹಾಂತೇಶ ಆತ್ಮೀಯ ಸ್ನೇಹಿತರು. ಮೊದಲು ಜಲ್ಲಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದವರು ಬಳಿಕ ಜತೆಯಾಗಿಯೇ ಕಬ್ಬಿನ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಅವರಿಬ್ಬರೂ ಟ್ರಿಪ್‌ ಹೋಗುವುದು, ಕುಡಿದು ಮಜಾ ಮಾಡುವುದೆಲ್ಲ ಜತೆಯಾಗಿಯೇ. ಒಮ್ಮೊಮ್ಮೆ ಹೋದರೆ ಇಬ್ಬರೂ ಕೆಲವು ದಿನ ಬರುತ್ತಲೇ ಇರಲಿಲ್ಲ.

 

ಹೀಗಿರುತ್ತ ಒಂದು ಸಾರಿ ಸುನಿಲ್‌ ಸಾಳುಂಕೆ ಮಹಾಂತೇಶನ ಹೆಂಡತಿ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ. ಇದನ್ನು ತಿಳಿದ ಮಹಾಂತೇಶ ಕೆಂಡಾಮಂಡಲನಾಗಿದ್ದಾನೆ. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಭಾರಿ ಜಗಳ, ಹೊಡೆದಾಟವೂ ನಡೆದಿತ್ತು. ಊರಿನಲ್ಲೆಲ್ಲ ಇದು ಸುದ್ದಿಯಾದ ಬಳಿಕ ಅವರಿಬ್ಬರ ಮಧ್ಯೆ ರಾಜಿ ಮಾಡಿಸಲಾಗಿತ್ತು. ಆ ಬಳಿಕ ಅವರು ಮತ್ತೆ ಹಿಂದಿನಂತೆ ಸ್ನೇಹಿತರಾಗಿಯೇ ಮುಂದುವರಿರಿದ್ದರು.

 

ಇದೇ ಸ್ನೇಹಾಚಾರದಲ್ಲಿ ಕಳೆದ ಅಕ್ಟೋಬರ್‌ ೭ರಂದು ಮಹಾಂತೇಶ ಸುನಿಲ್‌ನ ಮನೆಗೆ ಹೋಗಿದ್ದಾನೆ. ಅಲ್ಲಿ ಆತನ ತಾಯಿ, ಇತ್ತೀಚೆಗಷ್ಟೇ ಮದುವೆಯಾಗಿದ್ದ ಹೆಂಡತಿ, ತಮ್ಮ ಎಲ್ಲರೂ ಇದ್ದರು. ಮಹಾಂತೇಶ ಸುನಿಲ್‌ನನ್ನು ಕರೆದುಕೊಂಡು ಬಂದಿದ್ದಾನೆ. ಪಾರ್ಟಿ ಮಾಡುವ ಕಾರಣ ಹೇಳಿದ್ದರಿಂದ ಸುನಿಲ್‌ ಕೂಡಾ ಖುಷಿಯಾಗಿಯೇ ಬಂದಿದ್ದಾನೆ. ಅದಾದ ಬಳಿಕ ಇಬ್ಬರೂ ಚೆನ್ನಾಗಿಯೇ ಕುಡಿದಿದ್ದಾರೆ.

ಸುನಿಲ್‌ನನ್ನು ಅವನ ಬೈಕ್‌ನಲ್ಲೇ ಕರೆದುಕೊಂಡು ಬಂದಿದ್ದಾನೆ ಮಹಾಂತೇಶ. ಈ ನಡುವೆ ಇನ್ನಷ್ಟು ಕುಡಿಯೋಣ ಎಂದು ಸುನಿಲ್‌ನನ್ನು ಪುಸಲಾಯಿಸಿದ್ದಾನೆ. ಹಾಗಿದ್ದರೆ ತನ್ನ ಭಾವನಾಗಿರುವ (ಹೆಂಡತಿ ತಮ್ಮ) ರಾಜುನನ್ನೂ ಕರೆಯೋಣ ಎಂದು ಹೇಳಿದ್ದಾನೆ. ಬೈಕ್‌ ಬಿಡಲು ಯಾರಾದರೂ ಬೇಕಲ್ಲ ಎಂದು ರಾಜುನನ್ನು ಕರೆಸಲಾಗಿದೆ.

 

ಹೀಗೆ ಸುನಿಲ್‌ ಮತ್ತು ಮಹಾಂತೇಶನನ್ನು ಕೂರಿಸಿಕೊಂಡ ರಾಜು ಬೈಕನ್ನು ಕರೋಶಿಯು ಮೈನ್‌ ರೋಡ್‌ ನಿಂದ ಒಂದೈವತ್ತು ಮೀಟರ್‌ ದೂರ ಇರುವ ಜಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕುಡಿತದ ಜತೆಗೆ ಹಿಂದಿನ ಘಟನೆಗಳೆಲ್ಲ ಮತ್ತೆ ಎದ್ದುಬಂದಿವೆ. ನಿಜವೆಂದರೆ, ಮಹಾಂತೇಶ ಇದನ್ನೆಲ್ಲ ಪ್ಲ್ಯಾನ್‌ ಮಾಡಿಯೇ ಮಾಡಿದ್ದಾನೆ!

 

ಹೆಂಡತಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸೇಡಿಗಾಗಿ ಕಾಯುತ್ತಿದ್ದ ಮಹಾಂತೇಶ, ಸುನಿಲ್‌ಗೆ ಚೆನ್ನಾಗಿ ಕುಡಿಸಿದ್ದಾನೆ. ಆತ ಪ್ರಜ್ಞೆ ಕಳೆದುಕೊಳ್ಳುವ ಮಟ್ಟಕ್ಕೆ ಸಾಗಿದಾಗ ಆತನ ಕೊರಳಿಗೆ ತಾನು ತಂದಿದ್ದ ನೈಲಾನ್‌ ಹಗ್ಗವನ್ನು ಬಿಗಿದಿದ್ದಾನೆ. ಭಾವ ರಾಜು ಸುನಿಲ್‌ನನ್ನು ಕಾಲುಗಳನ್ನು ಹಿಡಿದುಕೊಂಡು ಸಹಾಯ ಮಾಡಿದ್ದಾನೆ.

 

ಹೀಗೆ ಕೊಲೆ ಮಾಡಿದ ಬಳಿಕ ದೇಹವನ್ನು ಸ್ವಲ್ಪ ದೂರದ ಪೊದೆಯಲ್ಲಿ ಹಾಕಲಾಗಿದೆ. ಬೈಕನ್ನು ಸ್ವಲ್ಪ ದೂರದಲ್ಲಿ ಇರಿಸಲಾಗಿದೆ. ಇಷ್ಟೆಲ್ಲ ಮಾಡಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮರುದಿನ ಮುಂಜಾನೆ ಶವ ಮತ್ತು ಬೈಕ್‌ ಗಮನಿಸಿದ ಜನರು ಸುನಿಲ್‌ನ ತಾಯಿಗೆ ವಿಷಯ ತಿಳಿಸಿದ್ದಾರೆ. ಆಕೆಗೆ ಮೊದಲ ಸಂಶಯ ಬಂದಿದ್ದೇ ಮಹಾಂತೇಶನ ಮೇಲೆ. ಆತನೇ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದು ಎಂದು ಹೇಳಿದರು. ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಷಯವನ್ನೂ ತಿಳಿಸಿದರು. ಹೀಗಾಗಿ ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ಕಷ್ಟವೇನೂ ಆಗಲಿಲ್ಲ. ಒಂದೆರಡು ದಿನ ತಲೆ ಮರೆಸಿಕೊಂಡ ಹಂತಕರು ಬಲೆಗೆ ಬಿದ್ದರು. ಹೀಗೆಲ್ಲ ನಡೆಯಿತು ಎಂದು ವಿವರ ನೀಡಿದ್ದಾರೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ