ಚಿಕ್ಕೋಡಿ: ಜಾರಕಿಹೋಳಿ ಕುಟುಂಬ, ಕತ್ತಿ ಕುಟುಂಬ ಹಾಗು ಲಕ್ಷಣ ಸವದಿ ಈ ಮೂವರು ಇಡಿ ಬೆಳಗಾವಿ ಜಿಲ್ಲೆಯನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ನಾಯಕರು. ಹಾಗಾಗಿಯೇ ಜನ ಇವರನ್ನ ಜಿಲ್ಲೆಯ ಸಾಹುಕಾರರು ಎಂದೇ ಕರೆಯುತ್ತಾರೆ. ಜಿಲ್ಲೆಯಲ್ಲಿ ತಮ್ಮದೆ ಆದ ಹಿಡಿತ ಹೊಂದಿರುವ ಈ ಮೂವರು ನಾಯಕರು ತಮ್ಮದೆ ರಾಜಕೀಯ ಲೆಕ್ಕಾಚಾರಗಳನ್ನ ಹಾಕಿ ರಾಜಕೀಯ ಮಾಡುತ್ತ ಬಂದಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯೂ ಅಷ್ಟೇ. ಈ ಮೂವರು ನಾಯಕರು ಒಂದೇ ಪಕ್ಷದಲ್ಲಿ ಇದ್ದರೂ ಡಿಸಿಸಿ ಬ್ಯಾಂಕ್ ವಿಚಾರ ಬಂದಾಗ ಮಾತ್ರ ತಮ್ಮದೇ ಬಣಗಳನ್ನ ಕಟ್ಟಿಕೊಂಡು ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆಯನ್ನ ರೂಪಿಸುತ್ತಾರೆ. 2015 ರಲ್ಲೂ ಮೂವರು ನಾಯಕರು ಅದ್ಯಕ್ಷ ಗಾದಿಗಾಗಿ ಸಾಕಷ್ಟು ಸಾಹಸ ಪಟ್ಟಿದ್ದಾರೆ. ಆ ವೇಳೆ ಮೂವರು ನಾಯಕರ ಮಧ್ಯೆ ವೈಮನಸ್ಸು ಉಂಟಾಗಿ ಕೊನೆಗೆ ಜಾರಕಿಹೋಳಿ ಕುಟುಂಬದ ಸಹಾಯದಿಂದ ಒಂದೇ ಮತದ ಅಂತರದಲ್ಲಿ ರಮೇಶ್ ಕತ್ತಿ ಅದ್ಯಕ್ಷ ಗಾದಿಯನ್ನ ಏರಿದರು.
ಆದರೆ ಈ ಬಾರಿ ಹಾಗಾಗಿಲ್ಲ. ಕಳೆದ ಬಾರಿಯಂತೆ ಈ ಬಾರಿಯ ತೀವ್ರ ಕುತೂಹಲ ಪಡೆಯುತ್ತೆ ಎಂದುಕೊಂಡಿದ್ದ ಚುನಾವಣೆ ಯಾವುದೇ ವೈಮನಸ್ಸು ಇಲ್ಲದೆ ಸುಸೂತ್ರವಾಗಿ ನಡೆದಿದೆ. ಅದಕ್ಕೆ ಕಾರಣವಾಗಿದ್ದು ಚಿಕ್ಕೋಡಿ ಸಂಸದ ಅಣ್ಣಾಸಾಬ ಜೋಲ್ಲೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಿಂದ ಹಿಡಿದು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯನ್ನ ಯಾವುದೆ ಸಮಸ್ಯೆ ಮಾಡಿಕೊಳ್ಳದೆ ಹೊಂದಾಣಿಕೆ ಮೂಲಕ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವಂತೆ ಪಕ್ಷದ ವರಿಷ್ಠರು ಆದೇಶ ನೀಡಿದ್ದರು. ಅದರಂತೆ ಒಗ್ಗಟ್ಟು ಪ್ರದರ್ಶನ ಮಾಡಿದ್ದ ಜಿಲ್ಲೆಯ ನಾಯಕರು ಒಂದೆ ವೇದಿಕೆಯಲ್ಲಿ ಕುಳಿತು ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯ ಇಲ್ಲಾ ಭಿನ್ನಾಭಿಪ್ರಾಯವನ್ನ ಬದಿಗಿಟ್ಟು ಒಗ್ಗಟ್ಟಾಗಿ ನಿರ್ದೇಶಕರ ಚುನಾವಣೆಯನ್ನ ಅವಿರೋಧ ಆಯ್ಕೆ ಮಾಡುತ್ತೇವೆ ಎಂದು ಹೇಳುದ್ರು. 16 ನಿರ್ದೇಶಕರ ಪೈಕಿ 15 ಬಿಜೆಪಿ ಬೆಂಬಲಿತ ನಿರ್ಧೆಶಕರು ಆಯ್ಕೆ ಆಗುತ್ತಿದ್ದಂತೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯುವ ಮೊದಲೇ ಮತ್ತೆ ಮೂವರು ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ರಮೇಶ್ ಜಾರಕಿಹೋಳಿ ಹಾಗೂ ಲಕ್ಷಣ ಸವದಿ ಡಿಸಿಸಿ ಬ್ಯಾಂಕ್ನ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ತಮ್ಮದೆ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಕೆಲವು ಬ್ಯಾಂಕ್ ನಿರ್ದೇಶಕರು ಸಹ ಚುನಾವಣೆ ನಡೆಸಬೇಕು ಎಂಬ ಒತ್ತಡವನ್ನು ಹೇರಿದ್ದನ್ನಲಾಗಿದೆ. ಇನ್ನೊಂದೆಡೆ ರಮೇಶ್ ಕತ್ತಿ ತನ್ನನ್ನ ಇನ್ನೊಂದು ಅವದಿಗೆ ಅಧ್ಯಕ್ಷನಾಗಿ ಮುಂದುರೆಸಲು ಅವಕಾಶ ಕಲ್ಪಿಸುವಂತೆ ಕೇಳಿದ್ದರು. ಬೆಂಗಳೂರಿನ ರೆಸಿಡೆನ್ಷಿಯಲ್ ಪ್ರದೇಶದಲ್ಲಿ ಕೆಮಿಕಲ್ ಗೋಡೌನ್ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಿ!
ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ನಾಯಕರು ತೆರೆ ಮರೆಯ ಕಸರತ್ತು ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ತಮ್ಮದೇ ಅಭ್ಯರ್ಥಿಗಳನ್ನ ನಿಲ್ಲಿಸಿ ಚುನಾವಣೆ ನಡೆಸಬೇಕು ಎಂಬ ಲೆಕ್ಕಾಚಾರ ಹಾಕಿದ್ದರು. ಆದ್ರೆ ಜೋಲ್ಲೆ ಮಾತ್ರ ಕತ್ತಿ ಕುಟುಂಬದ ಪರವಾಗಿ ಬ್ಯಾಟಿಂಗ್ ಮಾಡಿ ಜಿಲ್ಲೆಯ ಮೂವರು ನಾಯಕರನ್ನ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ಮೂವರು ಸಾಹುಕಾರನ್ನ ಒಟ್ಟಿಗೆ ಕೂಡಿಸಿ ಸಂಧಾನವನ್ನು ಮಾಡಿಸಿದ್ದರು.
ತೆರೆಮರೆಯ ಕಸರತ್ತು ನಡೆಸಿದ್ದ ಡಿಸಿಎಂ ಲಕ್ಷ್ಮಣ ಸವದಿ , ರಮೇಶ್ ಕತ್ತಿ ಹಾಗೂ ಉಮೇಶ್ ಕತ್ತಿಯನ್ನ ಚುನಾವಣೆ ನಡೆಯುವ ಒಂದು ದಿನದ ಮೊದಲೆ ಅಥಣಿಯಲ್ಲಿ ಒಟ್ಟುಗೂಡಿಸಿದ್ದರು. ಲಕ್ಷ್ಮಣ ಸವದಿ ಮತ್ತು ಕತ್ತಿ ಕುಟುಂಬದ ಮದ್ಯೆ ನಿಂತು ಮಾತುಕತೆ ನಡೆಸಿ ಯಾವುದೇ ವೈಮನಸ್ಸು ಇಲ್ಲದೆ ಮತ್ತೊಂದು ಅವದಿಗೆ ರಮೇಶ್ ಕತ್ತಿ ಅವರನ್ನೇ ಅಧ್ಯಕ್ಷರಾಗಿ ಆಯ್ಕೆಮಾಡುವಂತೆ ಲಕ್ಷ್ಮಣ ಸವದಿ ಮನ ಒಲಿಸಿದ್ದರು ಜೋಲ್ಲೆ. ಇನ್ನು ಅದೇ ದಿನ ಸಂಜೆ ಜಾರಕಿಹೊಳಿ ಬ್ರದರ್ಸ್ಗೂ ಭೇಟಿಯಾಗಿ ಮಾತುಕತೆ ಮಾಡಿದ್ದ ಜೋಲ್ಲೆ ಎಲ್ಲ ನಾಯಕರನ್ನ ಪ್ರತ್ಯೇಕವಾಗಿ ಭೇಟಿಯಾಗಿ ಮನಸ್ತಾಪ ದೂರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಿನಲ್ಲಿ ನಿರ್ದೇಶಕರ ಸ್ಥಾನಗಳನ್ನ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದ ಬಿಜೆಪಿ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಅಚ್ಚರಿಯ ಅಧ್ಯಕ್ಷರ ಆಯ್ಕೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಸಂಸದ ಅಣ್ಣಾಸಾಬ ಜೋಲ್ಲೆ ಎಲ್ಲಾ ನಾಯಕರ ಮನವೊಲಿಸಿ ವೈಮನಸ್ಸುಗಳನ್ನ ದೂರ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಮೂವರು ಸಾಹುಕಾರರನ್ನ ಒಟ್ಟುಗೂಡಿಸಿದ್ದಾರೆ.