ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಫುಲ್ ಕ್ಲೀನ್ ಆಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಈಗ 131ಕ್ಕೆ ಏರಿದೆ. ಸೋಂಕಿತರಲ್ಲಿ ಹೊಂಗಸಂದ್ರ, ಪಾದರಾಯನಪುರದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಹೊಂಗಸಂದ್ರ 29 ಮತ್ತು ಪಾದರಾಯನಪುರದಲ್ಲಿ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾದರಾಯನಪುರ ಮತ್ತು ಹೊಂಗಸಂದ್ರಗಳನ್ನು ರೆಡ್‍ಝೋನ್, ಹಾಟ್‍ಸ್ಪಾಟ್, ಕಂಟೈನ್‍ಮೆಂಟ್ ಎಂದು ಹೆಸರಿಸಲಾಗಿತ್ತು.
ದಿನಕ್ಕೆ ಹತ್ತಾರು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರದ ವಿಶೇಷ ಕಾಳಜಿ, ಬಿಬಿಎಂಪಿ ಹಾಗೂ ಹೆಲ್ತ್ ವಾರಿಯರ್ಸ್ ಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಹೊಂಗಸಂದ್ರ ಮತ್ತು ಪಾದರಾಯನಪುರದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿದೆ. ಕೊರೊನಾ ಕಂಟ್ರೋಲ್‍ಗೆ ಬಂದಿದೆ ಅನ್ನೋದಕ್ಕೆ ಈ ಎರಡೂ ಏರಿಯಾಗಳಲ್ಲಿ ಇತ್ತೀಚಿನ ವರದಿ ನೋಡಿದರೆ ತಿಳಿದು ಬರುತ್ತಿದೆ.
ಪಾದರಾಯನಪುರ ಈಗ ಸೇಫ್ ಆಗುತ್ತಿದೆ. ಬುಧವಾರ 48 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಎಲ್ಲಾ ಸ್ಯಾಂಪಲ್‍ಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಮತ್ತೆ 19 ಜನರ ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್ ಬರಬೇಕಿದೆ.
ಇನ್ನೂ ಹೊಂಗಸಂದ್ರ ನಿವಾಸಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. 78 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ. ಭಾನುವಾರ 49, ಸೋಮವಾರ 73, ಬುಧವಾರ 72 ಒಟ್ಟು ಮೂರು ದಿನಗಳಲ್ಲಿ 194 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ.
ಬಿಹಾರಿ ಕಾರ್ಮಿಕರನ್ನು ಬಿಟ್ಟು ಸ್ಥಳೀಯ ನಿವಾಸಿಗಳಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಹೊಂಗಸಂದ್ರ ವಿದ್ಯಾಜ್ಯೋತಿ ನಗರದ ಯಾವುದೇ ರಿಪೋರ್ಟ್ ಬಾಕಿ ಇಲ್ಲ. ಹೀಗಾಗಿ ಬೆಂಗಳೂರಿಗೆ ತಲೆನೋವಾಗಿದ್ದ ಹೊಂಗಸಂದ್ರ, ಪಾದರಾಯನಪುರ ಏರಿಯಾಗಳು ಕೊರೊನಾ ಮುಕ್ತವಾಗುತ್ತಿದ್ದು, ಶೀಘ್ರದಲ್ಲೇ ಗ್ರೀನ್ ಝೋನ್ ಆಗುವ ಸಾಧ್ಯತೆ ಇದೆ.