ಚಾಮರಾಜನಗರ: ಕೊರೊನಾ ಪ್ರಕರಣಗಳ ಹೈ ರಿಸ್ಕ್ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳುತ್ತಿದ್ದರು. ಇದೀಗ ಕಾಡುದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾದ ಮಹದೇಶ್ವರಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರುತ್ತಿದ್ದರು. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದರು. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್‍ಪೋಸ್ಟ್ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸುತ್ತಿದ್ದರು. ಈಗ ಕಾಡುದಾರಿಗಳಿಗೆ ಅಡ್ಡಲಾಗಿ ಮುಳ್ಳುಬೇಲಿ ಹಾಕಲಾಗಿದೆ. ಅಲ್ಲದೇ ಪೊಲೀಸ್, ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಪಾಲಾರ್, ಹೂಗ್ಯಂ, ಜಲ್ಲಿಪಾಳ್ಯ, ಗಾಜನೂರು, ಗರಿಕೆಕಂಡಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಈ ಮೂಲಕ ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆಯಿಂದ ಗಸ್ತು, ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಿಂದ ಬಿಗಿ ಕ್ರಮ ಕೈಗೊಳ್ಳಲಾಗಿದೆ
ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ದೇಶದಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಅಲ್ಲದೇ ತಮಿಳಿಗರು ಕಾಡಿನ ಕಳ್ಳದಾರಿಗಳ ಮೂಲಕ ಬಂದು ಕೊರೊನಾತಂಕ ಉಂಟುಮಾಡುತ್ತಿದ್ದರು. ಇದೀಗ ಕಳ್ಳದಾರಿ ಮೂಲಕ ಬರುತ್ತಿದ್ದವರಿಗೆ ಕಡಿವಾಣ ಹಾಕಲಾಗಿದೆ.
Laxmi News 24×7