Breaking News

ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಚರಂತಿಮಠ

Spread the love

ಬಾಗಲಕೋಟೆ: ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಬಗ್ಗೆ ಮತದಾರರಿಗೆ ನಂಬಿಕೆ ಮತ್ತು ವಿಶ್ವಾಸ ಇದೆ. ಹೀಗಾಗಿ ಬಾಗಲಕೋಟೆ ಉಪ ಚುನಾವಣೆಯಲ್ಲಿ ಜನರು ಬಿಜೆಪಿಗೆ ಸ್ಪಷ್ಟ ಬೆಂಬಲ ನೀಡುವ ಮೂಲಕ ಗೆಲುವು ತಂದು ಕೊಡಲಿದ್ದಾರೆ ಎಂದು ಬಾಗಲಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಗರದ 5ನೇ ವಾರ್ಡ್ 7ನೇ ವಾರ್ಡ್, ಜೈನಪೇಟೆ, ಬಾದೋಡಗಿ ಚಾಳ, ಕುಂಬಾರ ಮಡುವು ಇತ್ಯಾದಿ ಪ್ರದೇಶಗಳಲ್ಲಿ ಬೆಳಗ್ಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಅವರು  ಮಾತನಾಡಿದರು.
ನಗರದ ಗಜಾನನ ದೇವಸ್ಥಾನದಿಂದ ಪಾದಯಾತ್ರೆ ನಡೆಸಿದ ಅವರು, ಏ. 9 ರಂದು ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಕ್ಷೇತ್ರದಲ್ಲಿ ಎಲ್ಲ ಕಡೆಗೂ ಬಿಜೆಪಿ ಬಗ್ಗೆ ಜನರ ಉತ್ಸಾಹ ಇಮ್ಮಡಿಯಾಗಿರುವುದು ಕಂಡು ಬರುತ್ತಿದೆ. ಜನರ ಅತ್ಯುತ್ಸಾಹ ನೋಡಿದರೆ ಈ ಉಪ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದು, ಪಕ್ಷ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ ಎಂದು ಅವರು ಹೇಳಿದರು.
ಮತಯಾಚನೆಯಲ್ಲಿ ದೇವರಾಜ ಪಾಟೀಲ, ರಾಜು ನಾಯ್ಕರ, ಬಸವರಾಜ ಕಟಗೇರಿ, ದುಂಡಪ್ಪ ಏಳಮ್ಮಿ, ಸಂಗಯ್ಯ ಸರಗಣಾಚಾರಿ, ಮಂಜುನಾಥ ಏಳಮ್ಮಿ, ಮಲ್ಲು ಭಾಳಪ್ಪನವರ, ಜ್ಞಾನೇಶ್ವರ ಕಪಾಟೆ, ದೂಳಪ್ಪ ಯಳ್ಳಿಗುತ್ತಿ, ಮಲ್ಲು ಗಿರಿಗಾಂವಿ, ಬಂಡಪ್ಪ ಏಳಮ್ಮಿ, ಪ್ರಮೋದ ಅಂಬಿಗೇರ, ಶಶಿಕಲಾ ಮಜ್ಜಗಿ, ಬಸಪ್ಪ ಯಳ್ಳಿಗುತ್ತಿ ಮತ್ತಿತರರು ಇದ್ದರು.
 ಮನೋಹರ ಏಳಮ್ಮಿ ತಂಡ ಸೇರ್ಪಡೆ : ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆ ಆಗುವ ಕಾರ್ಯಕ್ರಮ ಗುರುವಾರ ಮುಂದುವರಿಯಿತು. ಕಾಂಗ್ರೆಸ್ ಮುಖಂಡ ಮನೋಹರ ಏಳಮ್ಮಿ ಸೇರಿ ಹಲವು ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಗುರುವಾರ ಸೇರ್ಪಡೆಯಾದರು.
ಗ್ರಾಮೀಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ:  ಬಾಗಲಕೋಟೆ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಗುರುವಾರ ಬಿರುಸಿನ ಪ್ರಚಾರ ನಡೆಸಿದರು. ಸುತಗುಂಡಾರ, ನಾಯನೇಗಲಿ, ನಾಯನೇಗಲಿ ಎಲ್.ಟಿ, ಮದುವಿನಕೊಪ್ಪ, ಚಿಟಗಿನಕೊಪ್ಪ, ದೇವಲಾಪುರ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿದರು.
ಹಿಂದೆ ಶಾಸಕರಿದ್ದ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ನೂತನ ಶಾಲೆಗಳು, ಆರೋಗ್ಯ ಕೇಂದ್ರಗಳು, ಜಲಜೀವನ್ ಮಿಷನ್  ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ, ಕಾಂಕ್ರೀಟ್ ರಸ್ತೆ, ಸಮುದಾಯಭವನ, ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣದ ಬಗ್ಗೆ ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಅಭಿವೃದ್ಧಿಗಾಗಿ ಬಿಜೆಪಿ ಮತ ನೀಡಿ ಎಂದು ಕೋರಿದರು.
ರಾಜೇಶ್ವರಿ ಚರಂತಿಮಠ ಮತಯಾಚನೆ :  ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಅವರ ಪತ್ನಿ ರಾಜೇಶ್ವರಿ ಚರಂತಿಮಠ ಅವರು ಗುರುವಾರ ನವನಗರದ ಸೆಕ್ಟರ್ ನಂಬರ್ 14, 15ರಲ್ಲಿ ನಗರದಲ್ಲಿ ಪ್ರಚಾರ ಕೈಗೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ವೀರಣ್ಣ ಚರಂತಿಮಠ ಅವರ ಅಭಿವೃದ್ಧಿ ಪರವಾದ ಚಿಂತನೆಗೆ ಕ್ಷೇತ್ರದಲ್ಲಿ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜಯಾ ಭದ್ರಶೆಟ್ಟಿ, ಸುಮಾ ಅಂಗಡಿ, ಲೀಲಾ ಬಾಗೇವಾಡಿ, ಗೀತಾ ಬಂಡಿವಡ್ಡರ, ದೇವಿಕಾ ಪಾತ್ರೋಟಿ, ಸಂಗಯ್ಯ ಸರಗಣಾಚಾರಿ, ಬಸವರಾಜ ಹುರಕಡ್ಲಿ ಮತ್ತಿತರರಿದ್ದರು.

Spread the love

About Laxminews 24x7

Check Also

ಬಿಜೆಪಿಯಿಂದ ಗ್ರಾಮೀಣದಲ್ಲಿ ಭರ್ಜರಿ ಪ್ರಚಾರ

Spread the loveಬಾಗಲಕೋಟೆ: ಮತಕ್ಷೇತ್ರದ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರಿಂದ ಭರ್ಜರಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ