Breaking News

ಸಹಕಾರಿ ಬ್ಯಾಂಕ್‍ಗಳ ಮೂಲಕ ರೈತರಿಗೆ ಹೆಚ್ಚು ಸಾಲ ವಿತರಣೆ: ಸಚಿವ ಎಸ್.ಟಿ.ಸೋಮಶೇಖರ್

Spread the love

ಬೆಳಗಾವಿ, ನ.18: ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‍ಗಳ ಮೂಲಕ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಇಲಾಖೆಯ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ “ಕೋರೊನಾ ಸೋಂಕು-ಆತ್ಮ ನಿರ್ಭರ ಭಾರತ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಮಹಾಂತೇಶ ನಗರದಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ ಡೇರಿ ಆವರಣದಲ್ಲಿ ಬುಧವಾರ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮನಿರ್ಭರ್ ಯೋಜನೆಯಡಿ 630 ಕೋಟಿ ರೂಪಾಯಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸಣ್ಣ ರೈತರು ಸೇರಿದಂತೆ ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಎಲ್ಲರಿಗೂ ಸಾಲ ಸೌಲಭ್ಯ ನೀಡಲಾಗುವುದು. ನಾಲ್ಕು ವಿಭಾಗಗಳ ಮೂಲಕ ಸಾಲ-ಸೌಲಭ್ಯವನ್ನು ವಿತರಿಸಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರಿ ಕ್ಷೇತ್ರ ಮುಂಚೂಣಿಗೆ: 1905 ಕಣಗಿನಹಾಳದಲ್ಲಿ ಆರಂಭಗೊಂಡ ಸಹಕಾರ ಸಂಸ್ಥೆಯು ಇಂದು 2.30 ಜನರು ಸಹಕಾರಿ ಕ್ಷೇತ್ರದ ಸದಸ್ಯತ್ವ ಹೊಂದಿದ್ದಾರೆ. ಸಮಾಜದ ಪ್ರತಿಯೊಂದು ರಂಗದಲ್ಲಿ ಸಹಕಾರಿ ರಂಗ ಮುಂಚೂಣಿಯಲ್ಲಿದೆ. 40 ಸಾವಿರಕ್ಕಿಂತ ಹೆಚ್ಚು ಸಂಸ್ಥೆಗಳು ವಿವಿಧ ಕ್ಷೇತ್ರದಲ್ಲಿ ಬೆಳೆದಿವೆ. ಕೆ.ಎಂ.ಎಫ್. ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯದ ಎಲ್ಲ 14 ಯುನಿಯನ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಅಮುಲ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೆ.ಎಂ.ಎಫ್. ಬೆಳವಣಿಗೆಗೆ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಭಾರತದಲ್ಲಿ ಅಮುಲ್ ಹಾಗೂ ಕೆ.ಎಂ.ಎಫ್. ಗಟ್ಟಿಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿವೆ ಎಂದರು.

ಪ್ರತಿದಿನ 89 ಲಕ್ಷ ಲೀಟರ್ ಹಾಲು ಸಂಗ್ರಹ ರೈತರಿಗೆ ಕೆ.ಎಂ.ಎಫ್. ಮೇಲಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ: ಕೆ.ಎಂ.ಎಫ್. ವತಿಯಿಂದ ರಾಜ್ಯದ ಎಲ್ಲ 12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ ಒದಗಿಸಲಾಗುವುದು. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸದ್ಯಕ್ಕೆ 15 ಸಾವಿರ ಕೋಟಿ ವಾರ್ಷಿಕ ವಹಿವಾಟನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 25 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 4-5 ಲಕ್ಷ ಲೀಟರ್ ಹಾಲು ಸಂಗ್ರಹಿಸಿದರೆ ಬೆಳಗಾವಿಯಲ್ಲಿ ಮೆಗಾ ಡೇರಿ ನಿರ್ಮಾಣ ಸಾಧ್ಯವಾಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯವರಾದ ಬಸನಗೌಡ ಪಾಟೀಲ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲ ಹದಿನಾಲ್ಕು ಯೂನಿಯನ್ ಗಳ ಅಧ್ಯಕ್ಷರು ಸೇರಿದಂತೆ ಸಾವಿರಾರು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.


Spread the love

About Laxminews 24x7

Check Also

ಗೋಮಾಳದಲ್ಲಿ ಅವೈಜ್ಞಾನಿಕ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಯತ್ನ: ವಿರೋಧಿಸಿ ತಹಶಿಲ್ದಾರ್ ಕಚೇರಿಗೆ ಕುರಿ ನುಗ್ಗಿಸಿ ಪ್ರತಿಭಟನೆ

Spread the loveದಾವಣಗೆರೆ: ಗೋಮಾಳ‌ ಜಾಗವನ್ನು ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮಂಜೂರು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ದಾವಣಗೆರೆ ಜಿಲ್ಲೆಯ ನ್ಯಾಮತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ