Breaking News

ಬೆಳಗಾವಿಯಲ್ಲಿ ಆಕ್ಸಿಜನ್ ಸಿಲಿಂಡರ್‌ ಕೊರತೆ

Spread the love

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್‌ ಸಿಲಿಂಡರ್‌ಗಳಿಗೆ ಪರದಾಟ ಎದುರಾಗಿದೆ.

‘ಬೇರೆ ಕಡೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಕೊಡುವಂತಿಲ್ಲ’ ಎಂದು ಅಲ್ಲಿನ ಜಿಲ್ಲಾಧಿಕಾರಿ ಆದೇಶಿಸಿರುವುದು ಇಲ್ಲಿ ಸಮಸ್ಯೆ ಸೃಷ್ಟಿಸಿದೆ. ಗಡಿ ತಾಲ್ಲೂಕುಗಳಾದ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಅಥಣಿ ಹಾಗೂ ರಾಯಬಾಗ ಭಾಗದ 30ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಹಲವು ದಿನಗಳಿಂದ ಆಕ್ಸಿಜನ್‌ ಸಿಲಿಂಡರ್‌ ಪೂರೈಕೆಯಲ್ಲಿ ಕೊರತೆ ಎದುರಾಗಿದೆ.

ಈ ಆಸ್ಪತ್ರೆಗಳು, ಆಕ್ಸಿಜನ್‌ಗಾಗಿ ಹಲವು ವರ್ಷಗಳಿಂದಲೂ ಕೊಲ್ಹಾಪುರದ ಕಂಪನಿಗಳನ್ನು ಅವಲಂಬಿಸಿವೆ. ಈಚೆಗೆ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಕೋವಿಡ್-19 ಸೇರಿದಂತೆ ಇತರ ರೋಗಿಗಳ ಚಿಕಿತ್ಸೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ಆತಂಕವನ್ನು ಆಸ್ಪತ್ರೆಗಳವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.

ರೋಗಿಗಳಿಗೆ ತೊಂದರೆ ಸಾಧ್ಯತೆ: ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರಾದರೂ ಅಲ್ಲಿನ ಜಿಲ್ಲಾಧಿಕಾರಿ ಆದೇಶ ತೊಡಕಾಗಿ ಪರಿಣಮಿಸಿದೆ. ದಿಢೀರ್‌ ಪೂರೈಕೆ ನಿಲ್ಲಿಸಿದರೆ ರೋಗಿಗಳ ಚಿಕಿತ್ಸೆ ನಿರ್ವಹಣೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.

‘ಈ ಆಸ್ಪತ್ರೆಗಳಲ್ಲಿ ಪ್ರಸ್ತುತ 300 ಮಂದಿ ಹೈಫ್ಲೋ ಆಕ್ಸಿಜನ್‌ನಲ್ಲಿದ್ದಾರೆ. ಅವರನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವುದು ಕೂಡ ಕಷ್ಟದ ಕೆಲಸವೇ. ಇದರಿಂದ ಪ್ರಾಣಾಪಾಯ ಆಗಲೂಬಹುದು. ಲಭ್ಯ ವ್ಯವಸ್ಥೆಯಲ್ಲಿ ನಿಭಾಯಿಸುತ್ತಿದ್ದೇವೆ. ಸರ್ಕಾರವು ಈ ಸಮಸ್ಯೆ ನಿವಾರಣೆಗೆ ಕೂಡಲೇ ಧಾವಿಸಬೇಕು. ಇಲ್ಲವಾದಲ್ಲಿ ಸಮಸ್ಯೆ ಉಲ್ಬಣಿಸಿ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇದೆ’ ಎಂಬ ಆತಂಕ ಅವರದು.

‘ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ಕೊಲ್ಹಾಪುರ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದಾರೆ. ಈ ತಾಲ್ಲೂಕುಗಳಿಗೆ ನಿತ್ಯ 150 ಜಂಬೋ ಸಿಲಿಂಡರ್‌ಗಳು (ತಲಾ 7ಸಾವಿರ ಲೀಟರ್‌) ಅಗತ್ಯವಿದೆ. ಆದರೆ, ವಾರದಿಂದ ಶೇ 25ರಷ್ಟು ಕೂಡ ಅಲ್ಲಿಂದ ದೊರೆತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದರು.

ಕೊಂಚವಷ್ಟೇ ಸಿಗುತ್ತಿದೆ: ‘ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೋರಿಕೆಗೆ ಸ್ಪಂದಿಸಿದ ಅಲ್ಲಿನ ಜಿಲ್ಲಾಧಿಕಾರಿ ಕೊಂಚ ಪ್ರಮಾಣದಲ್ಲಿ ಪೂರೈಕೆಗೆ ಸಮ್ಮತಿಸಿದ್ದಾರೆ. ವಾರಕ್ಕೆ 20 ಕಿಲೋ ಲೀಟರ್‌ ಮೆಡಿಕಲ್‌ ಆಕ್ಸಿಜನ್ ಅಗತ್ಯವಿದ್ದರೆ, 5 ಕಿಲೋ ಲೀಟರ್‌ ಮಾತ್ರವೇ ಸಿಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಹಳ ತೊಂದರೆ ಆಗಲಿದೆ. ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಮಟ್ಟದಲ್ಲಿ ಕ್ರಮವಾದರೆ ಒಳಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸಮಸ್ಯೆ ಗಮನಕ್ಕೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ತೊಂದರೆ ಇಲ್ಲ. ಏಕೆಂದರೆ ಅವು ಕೊಲ್ಹಾಪುರದ ಕಂಪನಿ ಅವಲಂಬಿಸಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಅಲ್ಲಿಂದ ಸರಬರಾಜಾಗುತ್ತಿತ್ತು. ಆ ಆಸ್ಪತ್ರೆಗಳಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಪರ್ಯಾಯ ವ್ಯವಸ್ಥೆ ಮಾಡಿದ್ದು, ಧಾರವಾಡದಿಂದ ತರಿಸುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೊಲ್ಹಾಪುರದ ಜಿಲ್ಲಾಧಿಕಾರಿ ಜೊತೆಗೂ ಚರ್ಚಿಸಿದ್ದೇನೆ. ಅವರು ಅಲ್ಲಿಯೂ ಕೊರತೆ ಇದೆ ಎನ್ನುತ್ತಿದ್ದಾರೆ. ಆದರೂ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಡಿ ಎಂದು ಕೋರಿದ್ದೇನೆ’ ಎಂದರು.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ