ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿ ಸಂಜೆ 4ಕ್ಕೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
‘ಅವರ ಬೀಗರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಬುಧವಾರ ತಡರಾತ್ರಿ ನವದೆಹಲಿ ತಲುಪಿದ ನಂತರ ಗುರುವಾರ ನಸುಕಿನ 3ರವರೆಗೂ ಚರ್ಚೆಯಾಯಿತು. ಅಂತಿಮವಾಗಿ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಪ್ರಕ್ರಿಯೆ ನೆರವೇರಲಿದೆ. ಮರಣೋತ್ತರ ಪರೀಕ್ಷೆಯ ನಂತರವೂ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ, ಈ ತೀರ್ಮಾನಕ್ಕೆ ಬರಲಾಗಿದೆ’ ಎಂದು ದೆಹಲಿಯಲ್ಲಿ ಅಂಗಡಿ ಕುಟುಂಬದವರೊಂದಿಗೆ ಇರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಪತ್ನಿ, ಮಗಳು, ಇಬ್ಬರು ಅಳಿಯಂದಿರು ದೆಹಲಿಯಲ್ಲೆ ಇದ್ದಾರೆ.
ಒಬ್ಬ ಮಗಳು ಡಾ.ಸ್ಫೂರ್ತಿ ಬೆಳಗಾವಿಯಲ್ಲಿದ್ದರು. ಅವರೊಂದಿಗೆ ಕುಟುಂಬದ ಕೆಲವರು ದೆಹಲಿಗೆ ವಿಮಾನದಲ್ಲಿ ಬಂದು ತಲುಪಲಿದ್ದಾರೆ. ಅವರೊಂದಿಗೆ ಆ ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಬಾಳಯ್ಯ ಸ್ವಾಮೀಜಿ ಕೂಡ ಬರುತ್ತಿದ್ದಾರೆ. ಲಿಂಗಾಯತ ವಿಧಿವಿಧಾನಗಳಂತೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.