ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು.
ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ವೀರಾ ರಾಘುವೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ದೇಶದ ಸಂವಿಧಾನದ ವ್ಯವಸ್ಥೆಯಲ್ಲಿ ದೇಶದ ನಾಗರಿಕರಿಗೆ ನ್ಯಾಯ ಒದಗಿಸಿಕೊಡುತ್ತೇವೆ ಎಂದು ಪ್ರಮಾಣ ವಚನ ಪಡೆದ ಒಬ್ಬ ವಕೀಲೆ ಭಯೋತ್ಪಾದಕರ ರೀತಿಯಲ್ಲಿ ವರ್ತಿಸಿದ್ದಾರೆ. ವಿಚಾರವಾದಿಯ ಮುಖಕ್ಕೆ ಮಸಿ ಬಳಿದಿರುವುದು ನ್ಯಾಯಾಂಗಕ್ಕೆ ಮಾಡಿದ ಅವಮಾನವಾಗಿದೆ ಎಂದು ವಕೀಲೆ ವಿರುದ್ಧ ಕಿಡಿಕಾರಿದರು.
ವಕೀಲೆ ವೀರಾ ರಾಘವೇಂದ್ರ ಅವರ ವಕೀಲ ವೃತ್ತಿಯ ಸನ್ನದನ್ನು ಕರ್ನಾಟಕ ವಕೀಲರ ಪರಿಷತ್ ಈ ಘಟನೆಯ ವಿಚಾರಣೆ ಮುಗಿಯುವವರೆಗೆ ಅಮಾನತ್ತಿನಲ್ಲಿ ಇಡಬೇಕು ಎಂದು ಒತ್ತಾಯ ಮಾಡಿದರು. ವಕೀಲೆಯನ್ನು ಗಡಿಪಾರು ಮಾಡುವಂತೆ ಪ್ರಗತಿಪರರು ಸರ್ಕಾರವನ್ನು ಒತ್ತಾಯಿಸಿದರು.
ಈಗಾಗಲೇ ಹಲವು ವಿಚಾರ ವಾದಿಗಳ ಹತ್ಯೆ ನಡೆದಿದೆ. ಪ್ರೊ. ಭಗವಾನ್ ಅವರಿಗೂ ಜೀವ ಬೆದರಿಕೆ ಇದ್ದು ಸರ್ಕಾರ ಅವರಿಗೆ ‘ಝಡ್ ‘ ಶ್ರೇಣಿಯ ಪೋಲಿಸ್ ಭದ್ರತೆ ಒದಗಿಸಬೇಕು ಪ್ರತಿಭಟನಾಕಾರರು ಒತ್ತಾಯಿಸಿದರು.