ಬಳ್ಳಾರಿ: ಜನ್ಮವಿತ್ತ ಮಗುವಿಗೆ ತಮ್ಮ ಜಿಲ್ಲೆಯ ಡಿಸಿ ಹೆಸರನ್ನೇ ನಾಮಕರಣ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ನೆಲೆಸಿರುವ ದಂಪತಿ ತಮ್ಮ ಮಗುವಿಗೆ ಡಿಸಿ ಎಸ್.ಎಸ್.ನಕುಲ್ ಅವರ ಹೆಸರನ್ನಿಟ್ಟಿದ್ದಾರೆ.
ಮಹಿಳೆಯ ತವರು ಮನೆ ಬಳ್ಳಾರಿಯಾಗಿದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಹೆರಿಗೆಗೆಂದು ಬಳ್ಳಾರಿಗೆ ಬಂದಿದ್ದರು. ಈ ವೇಳೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ವೇಳೆ ಹೆರಿಗೆಯನ್ನು ಯಶಸ್ವಿಯಾಗಿಯೇ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಾಡಿಸಲಾಗಿತ್ತು. ಅದೃಷ್ಟವಶಾತ್ ತಾಯಿಗೆ ಸೋಂಕಿದ್ದರೂ ಮಗುವಿಗೆ ಸೋಂಕು ತಗುಲಿರಲಿಲ್ಲ. ಅಂದು ಹೆರಿಗೆಯಾದ ಬಳಿಕ ಜಿಲ್ಲಾಸ್ಪತ್ರೆಗೆ ಡಿಸಿ ಎಸ್.ಎಸ್.ನಕುಲ್ ತೆರಳಿದ್ದಾರೆ. ಈ ವೇಳೆ ಬಾಣಂತಿಯನ್ನು ಹೇಗಿದ್ದೀರಮ್ಮಾ…?
ಚಿಕಿತ್ಸೆ ಚೆನ್ನಾಗಿ ಸಿಗುತ್ತಿದೆಯಾ ಎಂದು ಮಾತನಾಡಿಸಿದ್ದಾರೆ.
ಜಿಲ್ಲಾಧಿಕಾರಿಯವರ ಈ ಕಾಳಜಿಗೆ ಮನಸೋತ ಈ ದಂಪತಿ ಇದೀಗ ತಮ್ಮ ಗಂಡು ಮಗುವಿಗೆ ಡಿಸಿ ಅವರ ಹೆಸರಾದ ನಕುಲ್ ಎಂದು ನಾಮಕರಣ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ನ್ಯೂಸ್ ಫಸ್ಟ್ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿ ಶಾಕ್ ಗೆ ಒಳಗಾದರಲ್ಲದೆ ಅತೀವ ಆನಂದ ವ್ಯಕ್ತಪಡಿಸಿದರು. ಇದೊಂದು ಅವಿಸ್ಮರಣೀಯ ಘಟನೆ. ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿಗಳಿಗೆ ಮತ್ತು ಮಗುವಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಡಿಸಿ ಎಸ್.ಎಸ್.ನಕುಲ್