ಬೆಂಗಳೂರು: ಸದ್ಯ ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗಳ ಪೈಕಿ ಆರ್.ಆರ್ ನಗರ ಕ್ಷೇತ್ರದ ಉಪ ಚುನಾವಣೆ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ಇದೇ ಚುನಾವಣಾ ರಣಕಣ ಮತ್ತಷ್ಟು ರಂಗೇರುತ್ತಿದೆ. ಪ್ರಚಾರ ಕಾರ್ಯಕ್ಕಾಗಿ ಭರ್ಜರಿ ಸಿದ್ಧತೆಯನ್ನೇ ಮಾಡಿಕೊಳ್ಳುತ್ತಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕ್ಷೇತ್ರದಲ್ಲಿ ತಮ್ಮ ಪರವಾಗಿ ಪ್ರಚಾರದಲ್ಲಿ ಭಾಗಿಯಾಗುವಂತೆ ಜೋಡೆತ್ತುಗಳಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಹೌದು.. 2019ರ ಸಾರ್ವತ್ರಿಕ ಚುನಾವಣೆ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೋಡಿ ಮಾಡಿದ್ದ ದರ್ಶನ್ ಹಾಗೂ ಯಶ್ ಜೋಡಿಯನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಸಾರಥಿಗಳನ್ನಾಗಿ ಮಾಡುವ ಬಯಕೆಯನ್ನು ಮುನಿರತ್ನ ಹೊಂದಿದ್ದಾರಂತೆ. ಅಂದು ಮಂಡ್ಯ ಆಖಾಡದಲ್ಲಿ ಜೋಡೆತ್ತು ಎಂದೇ ಗುರುತಿಸಿಕೊಂಡಿದ್ದ ಈ ಸ್ಟಾರ್ ಜೋಡಿಯನ್ನು ಆರ್.ಆರ್ ನಗರ ಚುನಾವಣೆಯ ಕೇಂದ್ರಬಿಂದುವಾಗಿಸುವುದು ಮುನಿರತ್ನ ಅವರ ಯೋಚನೆ.
ಈ ಹಿನ್ನೆಲೆ ಮುನಿರತ್ನ ಈಗಾಗಲೇ ದರ್ಶನ್ ಮತ್ತು ಯಶ್ ಇಬ್ಬರಿಗೂ ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಆದರೆ, ಮುನಿರತ್ನರ ಆಹ್ವಾನಕ್ಕೆ ನಟರಿಬ್ಬರೂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುನಿರತ್ನ ಕೇವಲ ರಾಜಕಾರಿಣಿ ಮಾತ್ರವಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಹಲವು ದೊಡ್ಡ ಬಜೆಟ್‌ಗಳ ಸಿನಿಮಾಗಳಿಗೆ ಬಂಡವಾಳ ಹೂಡಿರೋ ನಿರ್ಮಾಪಕ ಕೂಡ ಹೌದು. ನಟ, ನಿರ್ದೇಶಕ ಉಪೇಂದ್ರ ಹಾಗೂ ದರ್ಶನ್ ಸೇರಿದಂತೆ ಹಲವರ ಚಿತ್ರಗಳಿಗೆ ಮುನಿರತ್ನ ಬಂಡವಾಳ ಹೂಡಿದ್ದರು.
ಇತ್ತ ತಮ್ಮ ಸಂಬಂಧಿ ರಾಕ್‌ಲೈನ್ ವೆಂಕಟೇಶ್ ಕೂಡ ಚಿತ್ರ ನಿರ್ಮಾಪಕರಾಗಿದ್ದು, ಈ ಇಬ್ಬರನ್ನು ಸ್ಯಾಂಡಲ್‌ವುಡ್‌ನ ದಿಗ್ಗಜ ನಿರ್ಮಾಪಕರು ಎಂದೇ ಬಣ್ಣಿಸಲಾಗುತ್ತದೆ. ಹೀಗಾಗಿ, ಮುನಿರತ್ನ ಆಹ್ವಾನಿಸಿದರೆ ಚಿತ್ರರಂಗದಲ್ಲಿ ಅದನ್ನು ಸುಲಭಕ್ಕೆ ಯಾವ ನಟರೂ ನಿರಾಕರಿಸುವುದಿಲ್ಲ.
ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ಜೋಡೆತ್ತುಗಳಾಗಿ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣರಾಗಿದ್ದ ದರ್ಶನ್ ಮತ್ತು ಯಶ್‌ರನ್ನು ಪ್ರಚಾರಕ್ಕೆ ಕರೆತರಲು ಮುನಿರತ್ನ ಭರ್ಜರಿ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ.
Laxmi News 24×7