ಬೆಂಗಳೂರು: ದೂರದ ಊರಿನಿಂದ ರಾಜ್ಯಕ್ಕೆ ವಾಪಸ್ ಬಂದ ಜನರಿಗೆ ಸರ್ಕಾರ ಸೂಕ್ತವಾದ ವ್ಯವಸ್ಥೆ ಕಲ್ಪಿಸದೇ ಜನಸಾಮಾನ್ಯರು ಬಿಎಂಟಿಸಿ ಬಸ್ಸಿನೊಳಗೆ ಕುಳಿತು ಪರದಾಡಿದ್ದಾರೆ.
ಬೇರೆ ರಾಜ್ಯದಿಂದ ಪುಟ್ಟಪುಟ್ಟ ಮಕ್ಕಳನ್ನು ಕಟ್ಟಿಕೊಂಡು, ಮನೆಸೇರಿಕೊಳ್ಳಲು ಬಂದಿರುವ ಈ ತಾಯಂದಿರ ಕಣ್ಣೀರು ನೋಡಿದ್ರೆ ಕರಳು ಚುರುಕ್ ಅನ್ನುತ್ತೆ. ನಿನ್ನೆ ಇಂದು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಕಾರಣ ಸರಿಯಾಗಿ ಊಟ ತಿನ್ನದೇ ಮಗುವಿಗೆ ಹಾಲು ಉಣಿಸಲು ಎದೆಹಾಲು ಬರುತ್ತಿಲ್ಲ ಎಂದು ಬಿಸಿಲಿನಲ್ಲಿ ಬಸ್ಸಿನೊಳಗೆ ಕುಳಿತು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.
ನಾವು ದೂರದ ಮೆಹಬೂಬ್ ನಗರದಿಂದ ಬಂದಿದ್ದೇವೆ. ಅಲ್ಲಿ ಮೂರು ತಿಂಗಳು ಕೆಲಸವಿಲ್ಲದೇ ಮನೆಯಲ್ಲೇ ಕುಳಿತ್ತಿದ್ದು. ನಮ್ಮ ಬಳಿ ಹಣವಿಲ್ಲ. ಹೀಗಿರುವಾಗ ರೈಲಿನಲ್ಲಿ 200 ರೂಪಾಯಿ ಟಿಕೆಟ್‍ಗೆ 1,200 ತೆಗೆದುಕೊಂಡಿದ್ದಾರೆ. ಈಗ ನೋಡಿದರೆ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲು ಒಬ್ಬರಿಗೆ 700 ರಿಂದ 900 ರೂ. ಕೇಳುತ್ತಿದ್ದಾರೆ. ಫ್ರೀ ಕ್ವಾರಂಟೈನ್‍ನಲ್ಲಿ ಅವ್ಯವಸ್ಥೆ ಇದೆ. ಈ ಮಕ್ಕಳನ್ನು ಕಟ್ಟಿಕೊಂಡು ನಾವು ಹೇಗೆ ನಿಭಾಯಿಸುವುದು ಎಂದು ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ.
ನಮಗೆ ಈ ರೀತಿ ಕ್ವಾರಂಟೈನ್ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಮನೆಯಲ್ಲಿ ಕ್ವಾರಂಟೈನ್ ಮಾಡುತ್ತಾರೆ ಎಂದುಕೊಂಡು ಬಂದಿದ್ದೇವೆ. ಆದರೆ ಇಲ್ಲಿ ಹೀಗೆ ಹೇಳುತ್ತಿದ್ದಾರೆ. ಬೆಳಗ್ಗೆಯಿಂದ ಕುಡಿಯಲು ನೀರು ಕೂಡ ಕೊಟ್ಟಿಲ್ಲ. ಈ ಬಸ್ಸಿನಲ್ಲೇ ಕೂರಿಸಿದ್ದಾರೆ. ಮಕ್ಕಳು ಹಾಲು ಬೇಕು ಎಂದು ಅಳುತ್ತಿವೆ. ಬಿಸಿಲಿನ ತಾಪಕ್ಕೆ ಬಳಲಿ ಹೋಗುತ್ತಿವೆ. ದಯವಿಟ್ಟು ಸೀಲ್ ಹಾಕಿ ಮನೆಗೆ ಕಳುಹಿಸಿದರೆ ನಾವು ಮನೆಯಲ್ಲೇ ಇರುತ್ತೇವೆ. ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.
ವಿದೇಶದಿಂದ ಬಂದವರು ಮತ್ತು ಹೊರ ರಾಜ್ಯದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ವೇಳೆ ರೋಗ ಲಕ್ಷಣ ಕಂಡು ಬಾರದೇ ಇದ್ದಲ್ಲಿ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.
ಈ ವಾರದ ಆರಂಭದಲ್ಲೇ ಸರ್ಕಾರ ಹೊರ ರಾಜ್ಯದಿಂದ ಬಂದವರು ಜಿಲ್ಲೆಗಳಿಗೆ ತೆರಳುವ ಮೊದಲು ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಆಗಲು ಒಪ್ಪಿಗೆ ನೀಡಿದರೆ ಮಾತ್ರ ಪ್ರಯಾಣಿಸಿ ಎಂದು ಹೇಳಿತ್ತು. ಈ ವಿಚಾರ ಹಲವು ಮಂದಿಗೆ ತಿಳಿಯದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ.