ಬೆಂಗಳೂರು,ಮೇ 6- ಸರಿಸುಮಾರು 42 ದಿನಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎಣ್ಣೆ ಪ್ರಿಯರಿಗೆ ಖುಷಿ ಕೊಟ್ಟಿದ್ದ ರಾಜ್ಯ ಸರ್ಕಾರ ಇದೀಗ ಕಿಕ್ ಹೊಡೆಸಲು ಮುಂದಾಗಿದೆ.
ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡಲು ಆದಾಯ ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಮೇಲಿನ ಮಾರಾಟ ದರವನ್ನು ಶೇ. 17ರಷ್ಟು ಹೆಚ್ಚಳ ಮಾಡಿ ಮದ್ಯ ಪ್ರಿಯರ ಕೈ ಸುಡುವಂತೆ ಮಾಡಿದೆ.
ನೂತನ ದರವು ಒಂದೆರಡು ದಿನಗಳಲ್ಲಿ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯುರಪ್ಪ ತಿಳಿಸಿದ್ದಾರೆ. ಈಗಾಗಲೇ ಬಜೆಟ್‍ನಲ್ಲಿ ಮದ್ಯದ ಮಾರಾಟದ ಮೇಲಿನ ತೆರಿಗೆಯನ್ನು ಶೇ.6ರಷ್ಟು ಹೆಚ್ಚಳ ಮಾಡಲಾಗಿತ್ತು. ಇದೀಗ ಹೊಸದಾಗಿ ಶೇ. 11 ಸೇರಿದಂತೆ ಒಟ್ಟು ಶೇ.17ರಷ್ಟು ತೆರಿಗೆ ಏರಿಕೆಯಾಗಲಿದೆ.
ಇದರಿಂದ ಮದ್ಯದ ಬೆಲೆ ಹೆಚ್ಚಾಗಲಿದ್ದು, ಬೊಕ್ಕಸಕ್ಕೆ ಹೆಚ್ಚಿನ ಅದಾಯ ಹರಿದುಬರಲಿದೆ. ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ವರಮಾನ ನೀಡುವ ಇಲಾಖೆಗಳಲ್ಲಿ ಅಬಕಾರಿ ಇಲಾಖೆಯೇ ಪ್ರಮುಖವಾದುದು. ವಾರ್ಷಿಕವಾಗಿ 22ರಿಂದ 25 ಸಾವಿರ ಕೋಟಿ ವರಮಾನ ನೀಡುವ ಈ ಇಲಾಖೆ ಶೇಕಡ 10ರಷ್ಟು ಬಜೆಟ್ ಗಾತ್ರವನ್ನು ಹೊಂದಿದೆ.
ಈಗಾಗಲೇ ದೆಹಲಿ, ಆಂಧ್ರಪ್ರದೇಶ, ತೆಲಾಂಗಣ ರಾಜ್ಯ ಸರ್ಕಾರಗಳು ನಿನ್ನೆಯಿಂದಲೇ ಜಾರಿಯಾಗುವಂತೆ ಮದ್ಯದ ಮಾರಾಟವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದ್ದಾರೆ. ಈಗಾಗಲೇ ಬಾರ್, ಎಂಎಸ್‍ಐಎಲ್ ಮಳಿಗೆಗಳಲ್ಲಿ ಶೇ.6ರಷ್ಟು ದರ ಏರಿಸಿ ಮಾರಾಟ ಮಾಡಲಾಗುತ್ತಿದೆ. ಒಂದು ವೇಳೆ ಬಾಟಲ್‍ಗಳಲ್ಲಿ ಹಳೆಯ ದರವಿದ್ದರೂ ಹೊಸ ದರದಂತೆಯೇ ಗ್ರಾಹಕರಿಗೆ ಮಾರಾಟ ಮಾಡಲು ಇಲಾಖೆ ಸೂಚನೆ ಕೊಟ್ಟಿದೆ.
ಬಿಯರ್, ವಿದೇಶಿ ಮದ್ಯ, ಭಾರತೀಯ ಮದ್ಯದ ದರವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ದೆಹಲಿಯಲ್ಲಿ ಶೇಕಡ 70 , ಆಂಧ್ರದಲ್ಲಿ ಶೇ.25, ತೆಲಂಗಾಣದಲ್ಲಿ ಶೇ.25 ದರವನ್ನು ಹೆಚ್ಚಳ ಮಾಡಲಾಗಿದೆ. ಇದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ಸರ್ಕಾರ ಮುಂದಾಗಿದೆ.
ಕಳೆದ 45 ದಿನಗಳಿಂದ ಅಬಕಾರಿ, ಸಾರಿಗೆ, ಮುದ್ರಣ ಮತ್ತು ನೋಂದಣಿ ಇತರೆ ಮೂಲಗಳಿಂದ ವರಮಾನ ಸಂಪೂರ್ಣವಾಗಿ ನಿಂತುಹೋಗಿದೆ. ಒಂದು ಮೂಲದ ಪ್ರಕಾರ ಸರಿಸುಮಾರು 10 ಸಾವಿರ ಕೋಟಿ ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಅಬಕಾರಿಯಿಂದ ಒಂದು ತಿಂಗಳಿಗೆ 2000ರಿಂದ 2500 ಕೋಟಿ, ಸಾರಿಗೆ ಇಲಾಖೆಯಿಂದ 500 ಕೋಟಿ, ಮುದ್ರಣ ಮತ್ತು ನೋಂದಣಿ 500 ಕೋಟಿ ಸೇರಿದಂತೆ ಪ್ರಮುಖ ಇಲಾಖೆಗಳಿಂದ 6ರಿಂದ 8 ಸಾವಿರ ಕೋಟಿ ವರಮಾನ ಬರುತ್ತಿತ್ತು.
ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ಹಬ್ಬಿದ ಪರಿಣಾಮ ಲಾಕ್‍ಡೌನ್ ಜಾರಿ ಮಾಡಲಾಯಿತು. 45 ದಿನಗಳಿಂದ ಬೊಕ್ಕಸಕ್ಕೆ ಒಂದೇ ಒಂದು ನಯಾಪೈಸೆ ಆದಾಯವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಮೀನಾಮೇಷ ಎಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಕೊರೊನಾ ಸೋಂಕು ಪತ್ತೆಯಾದ ರೋಗಿಗಳಿಗೆ ಔಷಧೋಪಾಚಾರ, ಆಶಾ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಆರೋಗ್ಯ, ಕಂದಾಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಸಿಬ್ಬಂದಿಗೆ ಊಟ ಕೆಲವು ಸವಲತ್ತುಗಳನ್ನು ನೀಡುತ್ತಿರುವುದರಿಂದ ಬೊಕ್ಕಸಕ್ಕೆ ಹೊರೆಯಾಗಿದೆ.
ಇದನ್ನು ಸರಿದೂಗಿಸಲು ಮದ್ಯದ ಮಾರಾಟದ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.