ಬೆಂಗಳೂರು, ಜೂ.18- ಕೊರೊನಾ ಸೋಂಕಿನ ಆತಂಕದ ನಡುವೆ ನಾಳೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸಲು ಪಿಯು ಮಂಡಳಿ ಸಜ್ಜಾಗಿದೆ. ಮಾರ್ಚ್‍ನಲ್ಲಿ ನಡೆಯಬೇಕಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಕೋವಿಡ್-19 ನಿಂದಾಗಿ ಮುಂದೂಡಲ್ಪಟ್ಟಿತ್ತು.
ಪರೀಕ್ಷೆ ನಡೆಸುವ ಬಗ್ಗೆ ಬೇಕು-ಬೇಡಗಳ ಚರ್ಚೆ ನಡೆಯುತ್ತಲೇ ಇದೆ. ಸುಮಾರು 5.95 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಸುಮಾರು 1116ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು , ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್‍ಕಡ್ಡಾಯವಾಗಿದ್ದು , ಪರೀಕ್ಷಾ ಕೇಂದ್ರದ ಹೊರಗೆ ಕೂಡ ಗುಂಪು ಸೇರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಎಲ್ಲ ಕೊಠಡಿಗಳನ್ನು ಈಗಾಗಲೇ ಸ್ಯಾನಿಟೈಸರ್ ಮಾಡಲಾಗಿದೆ. ವಿದ್ಯಾರ್ಥಿಗಳು ಥರ್ಮಲ್ ಸ್ಕ್ಯಾನಿಂಗ್ ತಪಾಸಣೆಗಾಗಿ ಆಶಾ ಕಾರ್ಯಕರ್ತೆಯರನ್ನು ಮತ್ತು ನರ್ಸ್‍ಗಳನ್ನು ನೇಮಿಸಲಾಗಿದೆ.
ಸೋಂಕು ಹೆಚ್ಚಾಗಿರುವ ಬಳ್ಳಾರಿ, ಗುಲ್ಬರ್ಗ, ರಾಯಚೂರು, ಉಡುಪಿ ಸೇರಿದಂತೆ ಇತರೆಡೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ತಾಂತ್ರಿಕ ಕಾರಣದಿಂದಾಗಿ ಕೇಂದ್ರ ಬದಲಾವಣೆಯಾಗದಿದ್ದ ಪಕ್ಷದಲ್ಲಿ ಅಥವಾ ಹೋಗಲು ಸಾಧ್ಯವಾಗದಿದ್ದರೆ ಅಂತಹ ವಿದ್ಯಾರ್ಥಿಗಳು ಮೂಲ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಬಹುದಾಗಿದೆ ಎಂದು ತಿಳಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಬಗ್ಗೆಯೂ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಲಾಗಿದೆ.