ಬೆಂಗಳೂರು, ಜೂ.15- ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ನ ಏಳು ಸದಸ್ಯ ಸ್ಥಾನಕ್ಕೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡುವ ಅಧಿಕಾರವನ್ನು ಪಕ್ಷದ ವರಿಷ್ಠರಿಗೆ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಇಂದು ಮಧ್ಯಾಹ್ನ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದು, ಒಂದು ಸ್ಥಾನ ಮಾತ್ರ ಆಯ್ಕೆ ಮಾಡಲು ಜೆಡಿಎಸ್‍ಗೆ ಸಾಧ್ಯವಾಗಲಿದೆ. ಹೀಗಾಗಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಕಸರತ್ತು ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ, ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ.
ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಿನ್ನಲೆಯಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಸಂಬಂಧ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಒಂದು ಸ್ಥಾನ ಇರುವುದರಿಂದ ಪ್ರಾದೇಶಿಕತೆ, ಸಮುದಾಯವಾರು ಪ್ರಾತಿನಿಧ್ಯತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ತೀವ್ರ ಪೈಪೋಟಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಅಧಿಕಾರವನ್ನು ವರಿಷ್ಠರಿಗೆ ನೀಡಲಾಗಿದೆ. ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂ.18 ಕಡೆಯ ದಿನವಾಗಿದೆ. ಹೀಗಾಗಿ ಶೀಘ್ರದಲ್ಲೇ ಅಭ್ಯರ್ಥಿ ಆಯ್ಕೆ ಮಾಡುವ ಭರವಸೆಯನ್ನು ಪಕ್ಷದ ನಾಯಕರು ನೀಡಿದ್ದಾರೆ.