ಬೆಂಗಳೂರು,ಜೂ.4-ರಾಜ್ಯ ವಿಧಾನಸಬೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಈವರೆಗೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.
10 ಜನ ಶಾಸಕರ ಸಹಿಯೊಂದಿಗೆ ಮೀಸಲಾತಿ ವ್ಯಾಪ್ತಿಯಡಿ ಬರುವ ಅಭ್ಯರ್ಥಿಗಳು 5 ಸಾವಿರ, ಸಾಮಾನ್ಯ ವರ್ಗದ ಅಭ್ಯರ್ಥಿಗಳು 10 ಸಾವಿರ ರೂ. ಠೇವಣಿಯೊಂದಿಗೆ ನಾಮಪತ್ರ ಸಲ್ಲಿಸಬಹುದು. ಆದರೆ ಈವರೆಗೂ ಯಾವ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ.
ಪ್ರತಿಯೊಬ್ಬ ಅಭ್ಯರ್ಥಿಯೂ ನಾಲ್ಕು 4 ನಾಮಪತ್ರಗಳನ್ನು ಸಲ್ಲಿಸಬಹುದು. ಇಂದಿನವರೆಗೆ ಸುಮಾರು 30 ಮಂದಿ ನಾಮಪತ್ರಗಳ ಅರ್ಜಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಯಾರೂ ಅರ್ಜಿಯನ್ನು ಸಲ್ಲಿಸಿಲ್ಲ.
ಪ್ರತಿಯೊಬ್ಬ ಅಭ್ಯರ್ಥಿಗಳ ಗೆಲುವಿಗೆ 45 ಮತಗಳ ಅಗತ್ಯವಿದೆ. ಹಾಗೆ ನೋಡಿದರೆ ಆಡಳಿತಾರೂಢ ಬಿಜೆಪಿ ಎರಡು ಸ್ಥಾನಗಳನ್ನು ನಿರಾಯಸವಾಗಿ ಗೆಲ್ಲಬಹುದು. ಕಾಂಗ್ರೆಸ್ 1 ಸ್ಥಾನ ಗೆಲ್ಲುವ ಅವಕಾಶವಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಪಕ್ಷೇತರರು ಮತ್ತು ಬಿಜೆಪಿಯ ಕೆಲ ಮತಗಳನ್ನು ಸೆಳೆದರೆ ಮತ್ತೊಂದು ಸ್ಥಾನವನ್ನು ಗೆಲ್ಲಬಹುದಾಗಿದೆ ಅಥವಾ ಬಿಜೆಪಿಯೇ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತ್ತಷ್ಟು ರಾಜಕೀಯ ಚಟುವಟಿಕೆಗಳು ನಡೆಯಲಿವೆ.