ಬೆಂಗಳೂರು, ಮೇ 19- ಕೇಂದ್ರ ಸರ್ಕಾರ ಘೋಷಿಸಿರುವ 21 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಸಾಲಕೊಟ್ಟು ಜನರನ್ನು ಬಡ್ಡಿ ಮಕ್ಕಳನ್ನಾಗಿ ಮಾಡುವಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜನರ ನೋವು ನಲಿವಿಗೆ ಸರ್ಕಾರ ಸ್ಪಂದಿಸಲಿಲ್ಲ. ತಮ್ಮ ಪಕ್ಷದ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಕ್ರಮ ನಡೆಸಿವೆ ಎಂದು ಆರೋಪಿಸಿದರು
ಕೇಂದ್ರ ಸರ್ಕಾರ 21 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಹೊರೆಯಾಗುವುದು ಕೇವಲ ಎರಡು ಲಕ್ಷ ಕೋಟಿ ಮಾತ್ರ. ಉಳಿದಿದ್ದೇಲ್ಲಾ ಬ್ಯಾಂಕ್ ಮೂಲಕ ಸಾಲ ಕೊಡುವುದಾಗಿದೆ. ಹಿಂದೆ ನಮ್ಮ ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲ್ ಅವರು ಜನರಿಗೆ ನಾವು ಸಾಲಕೊಟ್ಟು ಬಡ್ಡಿಮಕ್ಕಳನ್ನಾಗಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರು. ಹಾಗೆ ಕೇಂದ್ರ ಸರ್ಕಾರ ಜನರ ಖಾತೆಗೆ ನೇರವಾಗಿ ಹಣ ಹಾಕದೆ, ಸಾಲ ಕೊಡಿಸಿ ಪ್ಯಾಕೇಜ್ ಎಂದು ಘೋಷಿಸಿದೆ ಎಂದು ಟೀಕಿಸಿದರು.
ಸಂಕಷ್ಟದಲ್ಲಿದ್ದ ಜನರಿಗೆ ಊಟದ ಪ್ಯಾಕೇಟ್ ಕೊಟ್ಟಿಲ್ಲ, ಯಾವುದೇ ನೆರವು ನೀಡಿಲ್ಲ. ಹಾಗಾಗಿ ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ಹೋದರು. ದೇಶ ನಿರ್ಮಾಣಕ್ಕಾಗಿ ದುಡಿದವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಅಸಮಾದಾನ ವ್ಯಕ್ಯವಪಡಿಸಿದರು.ಲಾಕ್ ಡೌನ್ ಸಡಿಲಗೊಂಡ ಬಳಿಕ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ಎಲ್ಲಾ ವರ್ಗ ಹಾಗೂ ಧರ್ಮದ ಜನರನ್ನು ಭೇಟಿ ಮಾಡುತ್ತೇನೆ. ನೀವು ಅತಂತ್ರ ಸ್ಥಿತಿ ನಿರ್ಮಿಸಿದ ಸಮುದಾಯದವರನ್ನು ಭೇಟಿ ಮಾಡಿ ಧರ್ಯ ತುಂಬುತ್ತೇನೆ ಎಂದರು.ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರನ್ನು ಕಳುಹಿಸುತ್ತೇವೆ. ಇಲ್ಲಿಗೆ ಲಕ್ಷಾಂತರ ಜನ ಕರೆಸದೆ ಅಲ್ಲಿಂದಲೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ತಿಂಗಳಾಂತ್ಯದ ನಂತರ ದಿನಾಂಕ ಪ್ರಕಟಿಸಲಾಗುತ್ತದೆ ಎಂದರು.
ಪಕ್ಷ ಸಂಘಟನೆ ಬಗ್ಗೆ ಗೌಪ್ಯ ವರದಿ ಪಡೆಯಲಾಗುವುದು. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೆ, ಯಾರು ಮಾಡಲ್ಲ ಎಂಬ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.ಸೋಂಕಿತರ ಪರೀಕ್ಷೆ ಸರಿಯಾಗಿ ಮಾಡುತ್ತಿಲ್ಲ. ಕೆಲ ನಿರ್ಧಾರಗಳನ್ನು ಕ್ಷಣ ಕ್ಷಣಕ್ಕೂ ಬದಲಾವಣೆ ಮಾಡುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಪಲ್ಯವೇ ಕಾರಣ ಎಂದು ಆರೋಪಿಸಿದರು.
ರೈಲು ಸಂಚರಿಸಲಿದೆ ಎಂದು ಪ್ರಕಟಿಸಿ ತಕ್ಷಣ ವಾಪಾಸ್ ಪಡೆಯುತ್ತಾರೆ. ಅವರಲ್ಲಿ ಒಬ್ಬರ ನಡುವೆ ಒಬ್ಬರಿಗೆ ನಂಬಿಕೆ ಇಲ್ಲ ಎಂದು ಹೇಳಿದರು.
ಎಲ್ಲಾ ದಿನ ಕೆಲಸ ಮಾಡಿ ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಮಾಡುತ್ತಿರುವುದೇಕೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಗಿದರು.
ತರಕಾರಿ ಹಾಗೂ ಕೃಷಿ ಉತ್ಪನ್ನಗಳ ಖರೀದಿಗೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಎಲ್ಲಾ ಕಾರ್ಯಕ್ರಮ ನಿಲ್ಲಿಸಿ, ಅಧಿವೇಶನ ಕರೆದು ಬಜೆಟ್ ಬದಲಾವಣೆ ಮಾಡಿ ಬಡ ವರ್ಗಕ್ಕೆ ನೆರವು ನೀಡಿ. ನಮ್ಮಅಧಿಕಾರ ಇದ್ದಿದ್ದರೆ ಮನೆ ಮನೆಗೆ ಹೋಗಿ ಚೆಕ್ ಹಂಚಿಸಿ ಬಿಡುತ್ತಿದೆ. ಇವರಿಗೆ ಏನಾಗಿದೆ ಎಂದು ಕಿಡಿಕಾರಿದರು.
ಲಾಕ್ ಡೌನ್ ಸಡಿಲಿಕೆ ಸಂಪೂರ್ಣ ಅವೈಜ್ಞಾನಿಕ. ಯಾರೊಂದಿಗೂ ಚರ್ಚಿಸಿಲ್ಲ. ಸರ್ವಾಧಿಕಾರಿಗಳಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಾಗುವ ಅನಾವುತಗಳಿಗೆ ಸರ್ಕಾರ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
# ಅಧಿಕಾರ ಸ್ವೀಕಾರ:
ಮಾರ್ಚ್ 11ರಂದು ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಧ್ವಜ ಹಸ್ತಾಂತರ ಮಾಡಿ ಅಧಿಕಾರ ಸ್ವಿಕರಿಸುವ ಸಾಂಕೇತಿಕ ಕಾರ್ಯಕ್ರಮ ಕೊರೊನಾದಿಂದ ಈವರೆಗೂ ಆಗಿಲ್ಲ. ಹಾಗಂತ ನಾವು ಸುಮ್ಮನೆ ಕೂರದೆ ಜನರ ನಡುವೆ ಹೋಗಿ ಕೆಲಸ ಮಾಡಿದ್ದೇವೆ. ನಮ್ಮ ಕಾರ್ಯಕರ್ತರು ಸರ್ಕಾರಕ್ಕಿಂತ ಹೆಚ್ಚಿನ ಸೇವೆ ಮಾಡಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡಿದ್ದಾರೆ.
ಅಧಿಕಾರ ಸ್ವೀಕಾರ ಮೇ 31 ರಂದು ಮಾಡಿದರೆ ಭಾನುವಾರ ಇದೆ. ಮೇ 17 ರಂದು ಲಾಕ್ ಡೌನ್ ಮುಗಿಯಬಹುದು ಎಂದು ಕೊಂಡಿದ್ದೆ. ಆದರೆ ಅವತ್ತು ಸಂಪೂರ್ಣ ಲಾಕ್ ಡೌನ್ ಇದೆ. ಲಾಕ್ ಡೌನ್ ಸಡಿಲಗೊಂಡ ದಿನ ಅಧಿಕಾರ ಸ್ವೀಕರಿಸುತ್ತೇನೆ. ಇದು ನನ್ನ ಅಧಿಕಾರ ಸ್ವೀಕಾರ ಅಲ್ಲ.
ಪ್ರತಿ ಗ್ರಾಮ ಪಂಚಾಯತ್, ವಾರ್ಡ ಮಟ್ಟದಲ್ಲೂ ರಾಜ್ಯದ ಉದ್ದಗಲಕ್ಕೂ 7200 ಕಡೆ ಕಾರ್ಯಕ್ರಮ ನಡೆಯಲಿದೆ. ಪಾಲಿಕೆ, ನಗರಸಭೆ ವಾರ್ಡ್ ಗಳು, ಗ್ರಾ ಪಂ ನಿಂದ ಜಿಲ್ಲಾ ಪಂಚಾಯತ್ ನಲ್ಲಿ ಅಚರಣೆ ನಡೆಯುತ್ತೆ. ಅವತ್ತು ಸಂವಿಧಾನದ ಪೀಠಿಕೆ ಬೋಧನೆ ನಡೆಯುತ್ತೆ. ಅವತ್ತು ಎಲ್ಲೆಡೆ ಪೀಠಿಕೆಯ ಪಠಣ ನನ್ನೊಂದಿಗೆ ನಡೆಯುತ್ತೆ. ಕೆಲ ಮುಖಂಡರು ಮಾತನಾಡುತ್ತಾರೆ. ಎರಡು ಟಿವಿ ಇಟ್ಟು ನೇರ ಪ್ರಸಾರ ನಡೆಸಲಾಗುವುದು ಎಂದರು.