ಬೆಂಗಳೂರು: ಕೊರೊನಾ ಬರುತ್ತೆ ಕೆಲಸಕ್ಕೆ ಹೋಗಬೇಡ ಎಂದು ಅಣ್ಣ ಬೈದಿದ್ದಕ್ಕೆ ಆಶಾ ಕಾರ್ಯಕರ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸವಿತಾ(27) ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪಾವಗಡ ಮೂಲದ ಸವಿತಾ ನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಯಲಹಂಕದ ಮಾರುತಿ ನಗರದ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನಿಂದ ದೂರವಾಗಿ, ಅಣ್ಣನ ಮನೆಯಲ್ಲೇ ವಾಸಿಸುತ್ತಿದ್ದರು. ಅಣ್ಣನ ಮನೆಯಿಂದಲೇ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಬೇಡ ಎಂದು ಅಣ್ಣ ಬೈದಿದ್ದನಂತೆ. ಹೀಗಾಗಿ ಕಳೆದ ಹತ್ತು ದಿನಗಳಿಂದ ಸವಿತಾ ಕೆಲಸಕ್ಕೆ ಹೋಗಿರಲಿಲ್ಲ. ಅಲ್ಲದೆ ಅಣ್ಣನ ಬೈಗುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣದ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.